ಕೋಲ್ಕತಾ: ಗಂಟೆಗೆ 190 ಕಿಲೋಮೀಟರ್ ವೇಗದ ಬಿರುಗಾಳಿ ಸಹಿತ ಮಳೆಯೊಂದಿಗೆ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಪ್ಪಳಿಸಿರುವ ಅಂಫಾನ್ ಚಂಡಮಾರುತ ಘೋರ ಅನಾಹುತವನ್ನೇ ಸೃಷ್ಟಿಸಿದೆ. ಪ್ರಮುಖವಾಗಿ ಕಳೆದ 100 ವರ್ಷಗಳ ಇತಿಹಾಸದಲ್ಲಿ ಬಂಗಾಳ ಕಂಡ ಅತ್ಯಂತ ತೀಕ್ಷ್ಣ ಸ್ವರೂಪದ ಚಂಡಮಾರುತ ಇದಾಗಿದ್ದು, ಕೊರೋನಾದಿಂದ ನಲುಗಿದ್ದ ರಾಜ್ಯವನ್ನು ಮತ್ತಷ್ಟು ಕಂಗೆಡಿಸಿದೆ.
ಚಂಡಮಾರುತದ ಅಬ್ಬರ ಬಂಗಾಳದಲ್ಲಿ 76 ಮಂದಿಯನ್ನು ಬಲಿ ಪಡೆದುಕೊಂಡಿದ್ದು, ಒಡಿಶಾದಲ್ಲಿ 6 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಅಂದಾಜು 1 ಕೋಟಿ ಜನರನ್ನು ತೀವ್ರ ಸಮಸ್ಯೆಯ ಮಡಿಲಿಗೆ ತಳ್ಳಿದೆ. ಈ ನಡುವೆ ಚಂಡಮಾರುತದಿಂದಾಗಿ ಸಂಕಷ್ಟಕ್ಕೆ ಸಿಕ್ಕಿರುವ ಬಂಗಾಳ ಹಾಗೂ ಒಡಿಶಾ ರಾಜ್ಯಗಳಿಗೆ ಎಲ್ಲಾ ರೀತಿಯ ನೆರವಿನ ಭರವಸೆಯನ್ನು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನೀಡಿದ್ದಾರೆ.
ಜೊತೆಗೆ ಶುಕ್ರವಾರ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆಗೆ ಪ್ರಧಾನಿ ಮೋದಿಯವರು ನಿರ್ಧರಿಸಿದ್ದು, ಈಗಾಗಲೇ ವೈಮಾನಿಕ ಸಮೀಕ್ಷೆ ನಡೆಸುವ ಸಲುವಾಗಿ ಪಶ್ಚಿಮ ಬಂಗಾಳಕ್ಕೆ ದೆಹಲಿಯಿಂದ ತೆರಳಿದ್ದಾರೆಂದು ವರದಿಗಳು ತಿಳಿಸಿವೆ.
ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ 20 ಮತ್ತು ಒಡಿಶಾದಲ್ಲಿ 19 ಎನ್’ಡಿಆರ್ಎಫ್ ತುಡಕಿ ನಿಯೋಜಿಸಲಾಗಿದ್ದು, ಅವು ಭಾರೀ ಪ್ರಮಾಣದಲ್ಲಿ ರಕ್ಷಣಾ ಕಾರ್ಯ ಕೈಗೊಂಡಿವೆ. ಜೊತೆಗೆ ಪಶ್ಚಿಮ ಬಂಗಾಳಕ್ಕೆ ಹೆಚ್ಚುವರಿಯಾಗಿ ಇನ್ನೂ 4 ತುಕಟಿಗಳನ್ನು ರವಾನಿಸಲು ಎನ್’ಡಿಆರ್ಎಫ್ ನಿರ್ಧರಿಸಿದೆ. ಮತ್ತೊಂಡೆದೆ ಚಂಡಮಾರುತ ಬಾಂಗ್ಲಾದೇಶವನ್ನು ತಲುಪಿದ್ದು, ನಿಧಾನವಾಗಿ ತನ್ನ ತೀವರತೆಯನ್ನು ಕಳೆದುಕೊಳ್ಳುತ್ತಿದೆ.
Follow us on Social media