ಬೆಂಗಳೂರು: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಅನುಮತಿ ನೀಡಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯು ಕೈಗೊಂಡ ನಿರ್ಣಯವನ್ನು ಆಧರಿಸಿ ಮುಂದಿನ ಕ್ರಮ ಜರುಗಿಸಬಾರದು’ ಎಂದು ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ.
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಮತ್ತು ರಾಜ್ಯ ವನ್ಯಜೀವಿ ಮಂಡಳಿ ನಿರ್ಣಯ ಪ್ರಶ್ನಿಸಿ ‘ವೃಕ್ಷ ಯೋಜನಾ ಪ್ರತಿಷ್ಠಾನ’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಮತ್ತು ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ‘ಈ ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಜರುಗಿಸಬಾರದು’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಪ್ರತಿವಾದಿಗಳಾದ ರಾಜ್ಯ ವನ್ಯಜೀವಿ ಮಂಡಳಿ, ರಾಜ್ಯ ಅರಣ್ಯ ಮತ್ತು ಪರಿಸರ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ. ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದ್ದು ವಿಚಾರಣೆಯನ್ನು ಜುಲೈ 14ಕ್ಕೆ
ಮುಂದೂಡಲಾಗಿದೆ
2020ರ ಮಾರ್ಚ್ 20ರಂದು ನಡೆದ ಕರ್ನಾಟಕ ವನ್ಯಜೀವಿ ಮಂಡಳಿ ಸಭೆಯಲ್ಲಿ ಯೋಜನೆಗೆ ಅನುಮತಿ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಆ ಸಭೆಯಲ್ಲಿ ಮಂಡಳಿಯ ಸದಸ್ಯರಲ್ಲದ ಇಬ್ಬರು ಮಂತ್ರಿಗಳು ಭಾಗವಹಿಸಿದ್ದರೆಂದು ಆಕ್ಷೇಪಿಸಲಾಗಿದೆ.
Follow us on Social media