ಬೆಂಗಳೂರು: ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮಾನಸಿಕ ಸಮತೋಲನ ಕಳೆದುಕೊಂಡು ಓಡಾಡುತ್ತಿದ್ದಾರೆ. ಇವರ ಸ್ಥಿತಿಯನ್ನು ನೋಡಿ ಕೆಲವರು ವಿಡಿಯೋ ಮಾಡಿ ಲೇವಡಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ವೆಂಕಟ್ ಸ್ಥಿತಿಗೆ ಮರುಗುತ್ತಿದ್ದಾರೆ. ಸದ್ಯ ಊಟ ಇಲ್ಲದೆ ಕೆಲವರಿಂದ ಹಲ್ಲೆಗೊಳಗಾಗಿರುವ ವೆಂಕಟ್‍ಗೆ ಸುದೀಪ್ ಚಿಕಿತ್ಸೆಗೆ ನೆರವಾಗಲು ಮುಂದಾಗಿದ್ದಾರೆ.
ಕಿಚ್ಚ ಚಾರಿಟೇಬಲ್ ಸೊಸೈಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಜನರು ಸ್ವಲ್ಪ ಸಂಯಮದಿಂದ ವರ್ತಿಸಬೇಕೆಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ಮನವಿ ಮಾಡಿದ್ದಾರೆ.
ಆತ್ಮೀಯರೆ ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಜರ್ಜಿರಿತರಾಗಿ ಓಡಾಡುತ್ತಿದ್ದ ಹುಚ್ಚ ವೆಂಕಟ್ ಅವರ ಮೇಲೆ ದೈಹಿಕವಾಗಿ ಹಲ್ಲೆಯಾಗುತ್ತಿದ್ದು, ಸಾರ್ವಜನಿಕರು ಸ್ವಲ್ಪ ಸಂಯಮ ಮತ್ತು ಕರುಣೆ ತೋರಿ.
ಹುಚ್ಚ ವೆಂಕಟ್ ಅವರಿಗೆ ಚಿಕಿತ್ಸೆ ಮತ್ತು ಸ್ವಾಂತನ ನೀಡಲು ನಮ್ಮ ಕಿಚ್ಚ ಸುದೀಪ್ ಸರ್ ನಿರ್ಧರಿಸಿ, ಕಿಚ್ಚ ಸುದೀಪ ಚಾರಿಟೇಬರ್ ಸೊಸೈಟಿಗೆ ಅನುಮತಿ ನೀಡಿದ್ದಾರೆ. ಹೀಗಾಗಿ ಯಾವುದೇ ಸ್ಥಳದಲ್ಲಿ ಹುಚ್ಚ ವೆಂಕಟ್ ಅವರು ಕಂಡು ಬಂದಲ್ಲಿ ನಮಗೆ ಕರೆ ಮಾಡಿ ತಿಳಿಸಿ. ಮಾನವೀಯತೆ ಗೆಲ್ಲುವ ಹಾಗೆ ಮಾಡಿ ಎಂದು ಮೊಬೈಲ್ ನಂಬರ್ ನೀಡಿದ್ದಾರೆ.
ಜೂನ್ 10 ರಂದು ಮಂಡ್ಯದ ಉಮ್ಮಡಹಳ್ಳಿ ಹುಚ್ಚಾ ವೆಂಕಟ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿತ್ತು. ಟೀ ಕುಡಿಯಲು ಬಂದಾಗ ಆತನನ್ನು ರೇಗಿಸಿ ಯುವಕರ ಗುಂಪು ಹಲ್ಲೆ ಮಾಡಿತ್ತು. ಈ ಕುರಿತು ಟೀ ಅಂಗಡಿ ಮುಕ್ರಂ ಪಾಷ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 504(ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು) ಹಾಗೂ 506(ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಆರೋಪಿ ಯುವಕರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Follow us on Social media