ಬೆಂಗಳೂರು: ಲಾಕ್’ಡೌನ್ ಸಂದರ್ಭದಲ್ಲಿ ಕೊರೋನಾ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಹೋರಾಟ ಮಾಡಿತ್ತು. ಆದರೆ, ಜುಲೈ ಮೊದಲ ವಾರದಲ್ಲಿ ಸೋಂಕಿನ ಪ್ರಮಾಣ ಈ ಮಟ್ಟಕ್ಕೆ ಏರಿಕೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಬುಧವಾರ ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರೆದಿದ್ದ ತುರ್ತುಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಲಾಕ್’ಡೌನ್ ಸಡಿಲಗೊಳಿಸಿದ ಬಳಿಕ ಸೋಂಕಿನ ಪ್ರಮಾಣ ಹೆಚ್ಚುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ, ಜುಲೈ ಮೊದಲ ವಾರದಲ್ಲಿಯೇ ಸೋಂಕಿತರ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಜುಲೈ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಈ ಮಟ್ಟಕ್ಕೆ ಸೋಂಕು ತಗುಲಬಹುದು ಎಂದುಕೊಂಡಿದ್ದೆವು ಎಂದು ಹೇಳಿದ್ದಾರೆ.
ಕೇಂದ್ರ ತಂಡ ನೀಡಿರುವ ಸಲಹೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವ ಕುರಿತು, ಆ್ಯಂಬುಲೆನ್ಸ್ ಸೇವೆ ಹಾಗೂ ಸೋಂಕು ಹರಡುವುದನ್ನು ತಡೆಯಲು ಕಂಟೈನ್ಮೆಂಟ್ ಝೋನ್ ಗಳಲ್ಲಿ ತೆಗೆದುಕೊಳ್ಳಬಹುದಾದ ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಮತ್ತೆ 100 ಆ್ಯಂಬುಲೆನ್ಸ್ ಗಳನ್ನು ಸೇರ್ಪಡೆಗೊಳಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇದರಿಂದ ನಗರದಲ್ಲಿ ಆ್ಯಂಬುಲೆನ್ಸ್ ಗಳ ಸಂಖ್ಯೆ 500ಕ್ಕೆ ಏರಿಕೆಯಾಗಲಿದೆ. ಲಕ್ಷಣ ರಹಿತ ರೋಗಿಗಳನ್ನು ಕೊರೋನಾ ಆರೈಕೆ ಕೇಂದ್ರಗಳು ಅಥವಾ ಯಾವುದೇ ವಾಹನದಲ್ಲಿ ಆಸ್ಪತ್ರೆಗಳಿಗೆ ದಾಖಲು ಮಾಡಬಹುದಾಗಿದೆ. ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಿದೆ ಎಂದು ಸುಧಾಕರ್ ಅವರು ತಿಳಿಸಿದ್ದಾರೆ.
ಸೋಂಕಿತ ವ್ಯಕ್ತಿಗಳು ಬಿಬಿಎಂಪಿ ವಾರ್ ರೂಮ್’ಗೆ ಕರೆ ಮಾಡಿದ ಕೂಡಲೇ ಆ್ಯಂಬುಲೆನ್ಸ್ ಗಳನ್ನು ಕಳುಹಿಸಲಾಗುತ್ತದೆ. ಕೂಡಲೇ ಆ್ಯಂಬುಲೆನ್ಸ್ ಮೂಲಕ ಸೋಂಕಿತರ ವ್ಯಕ್ತಿಗಳನ್ನು ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗಳಿಗೆ ದಾಖಲು ಮಾಡಲಾಗುತ್ತದೆ. ಈಗಾಗಲೇ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನಾಲಯ ಕೇಂದ್ರವನ್ನು ಕೊರೋನಾ ಆರೈಕೆ ಕೇಂದ್ರವಾಗಿ ಮಾರ್ಪಡಿಸಲಾಗಿದ್ದು, 10,000 ಹಾಸಿಗೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರತೀ 100 ರೋಗಿಗಳಿಗೆ ಓರ್ವ ವೈದ್ಯನ್ನು ತೆಗೆದುಕೊಂಡರೂ, ಸಾಕಷ್ಟು ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳ ಅಗತ್ಯವಿದೆ. ಈ ಕುರಿತು ಕಾರ್ಯಗಳು ಮುಂದುವರೆದಿವೆ ಎಂದಿದ್ದಾರೆ.
Follow us on Social media