ರಾಮನಗರ: ಕೊರೋನಾ ವೈರಸ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದ ಕುರಿತು ಜನರಲ್ಲಿನ ಅಪನಂಬಿಕೆಯನ್ನು ತೊಡೆದು ಹಾಕಲು ಸಂಸದ ಡಿ.ಕೆ.ಸುರೇಶ್ ಮಹತ್ವದ ಹೆಜ್ಜೆ ಇಟ್ಟಿದ್ದು, ತಮ್ಮ ಕ್ಷೇತ್ರದ ವ್ಯಾಪ್ತಿಯ ನಿವಾಸಿ ಅಂತ್ಯಕ್ರಿಯೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಭಾಗವಹಿಸಿ, ಮೌಢ್ಯತೆಯನ್ನು ಅಳಿಸುವ ಪ್ರಯತ್ನ ಮಾಡಿದ್ದಾರೆ.
ಮೂರು ದಿನದ ಹಿಂದೆ ಕನಕಪುರದ ಸಪ್ತಗಿರಿ ಜ್ಯುವೆಲರ್ಸ್ ಮಾಲೀಕ ನರಸಿಂಹ ಶೆಟ್ಟಿ (73) ಅವರಿಗೆ ಸೋಂಕು ದೃಢವಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯನ್ನು ಕನಕಪುರದ ದೇಗುಲ ಮಠದ ಸಮೀಪದ ಸ್ಮಶಾನದಲ್ಲಿ ಮಾಡಲು ತೀರ್ಮಾನಿಸಲಾಗಿತ್ತು.
ಅಂತ್ಯ ಸಂಸ್ಕಾರದಲ್ಲಿ ಪಿಪಿಇ ಕಿಟ್ ಧರಿಸಿ ಸಂಸದ ಡಿ.ಕೆ.ಸುರೇಶ್ ಭಾಗವಹಿಸಿದ್ದರು. ಅವರ ಜೊತೆಗೆ ವಿಧಾನ ಪರಿಷತ್ ಸದಸ್ಯ ರವಿ ಹಾಗೂ ನಗರಸಭೆ ಸದಸ್ಯರು ಅಂತ್ಯಕ್ರಿಯೆಯಲ್ಲಿದ್ದರು. ಜನರಲ್ಲಿನ ಅಪನಂಬಿಕೆ ತೊಲಗಿಸಲು ಈ ಕ್ರಮ ಅವಶ್ಯಕತೆಯಿತ್ತು ಎಂದು ಅವರು ಹೇಳಿದ್ದು, ಕೆಲ ದಿನಗಳ ಹಿಂದೆ ಬಹಿರಂಗ ಪತ್ರವೊಂದನ್ನು ಬರೆದು ಸೋಂಕಿನಿಂದ ಮೃತಪಟ್ಟವರಿಗೆ ಗೌರವಯುತ ಅಂತಿಮ ಸಂಸ್ಕಾರ ನಡೆಸುವಂತೆ ಡಿ.ಕೆ.ಸುರೇಶ್ ಕೇಳಿಕೊಂಡಿದ್ದರು.
ಹೋರಾಟ ರೋಗದ ವಿರುದ್ಧ ಇರಬೇಕೆ ಹೊರತು, ರೋಗಿಯ ವಿರುದ್ಧ ಅಲ್ಲ ಎಂಬುದನ್ನು ತಮ್ಮ ನಡುವಳಿಕೆಯಿಂದ ತೋರಿಸಿ ಕೊಟ್ಟಿದ್ದಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಹತಾಶರಾಗುವ ಬದಲು, ಧೈರ್ಯದಿಂದ ಇರಬೇಕು ಹೇಳುವುದರೊಂದಿಗೆ, ಅದರಂತೆ ನಡೆದುಕೊಂಡು ಜನರಲ್ಲಿ ಧೈರ್ಯ ತುಂಬಿದ್ದಾರೆ .
ಕೊರೊನಾ ವೈರಸ್ ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಗಳಿಂದ ಸಮಾಜಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಹೀಗಾಗಿ ಶವ ಸಂಸ್ಕಾರಕ್ಕೆ ಪ್ರತಿರೋಧ ಒಡ್ಡುವುದು, ಅಡ್ಡಿಪಡಿಸುವುದು ನಮ್ಮ ಸಂಸ್ಕೃತಿಯೂ ಅಲ್ಲ, ಸದಾಚಾರವೂ ಅಲ್ಲ. ಈ ವಿಷಯದಲ್ಲಿ ಬರೀ ಊಹಾಪೋಹಗಳನ್ನು ಹಬ್ಬಿಸಲಾಗಿದೆ ಎಂದು ಹೇಳಿದ್ದರು.
Follow us on Social media