ಮೈಸೂರು: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಪ್ರಧಾನಿ ಮಟ್ಟಕ್ಕೆ ಏರಿಸಿಕೊಳ್ಳಬಾರದು. ತಮ್ಮ ಬೌಂಡರಿಯನ್ನು ರಾಜ್ಯಕ್ಕೆ ಸೀಮಿತಗೊಳಿಸಿಕೊಳ್ಳುವುದು ಉತ್ತಮ’ ಎಂದು ಸಂಸದ ಪ್ರತಾಪಸಿಂಹ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗಗೆ ಮಾತನಾಡಿದ ಅವರು ಪ್ರತಿ ಬಾರಿ ನಿಮ್ಮನ್ನು ಪ್ರಶ್ನಿಸಿದಾಗ ನೀವು ಪ್ರಧಾನಿ ಹೆಸರು ಮಧ್ಯೆ ತರಬೇಡಿ ಮತ್ತು ನಿಮ್ಮ ಮಟ್ಟವನ್ನು ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಮಾತೆತ್ತಿದರೆ ಪಿಎಂ ಕೇರ್ ಗೆ ಲೆಕ್ಕ ಕೊಡಿ ಎಂದು ಪ್ರಶ್ನಿಸುತ್ತಾರೆ. ಪ್ರಧಾನಿ ಮಟ್ಟಕ್ಕೆ ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನೀವೇನಾದರೂ ಈ ರೀತಿ ಪ್ರಶ್ನೆ ಕೇಳುತ್ತಿದ್ದೀರಾ? ನಿಮ್ಮ ವ್ಯಾಪ್ತಿ ಇಲ್ಲಿಯ ಕರ್ನಾಟಕದ ಬೌಂಡರಿ ಒಳಗೇ ಇರಲಿ, ಎಲ್ಲದಕ್ಕೂ ಪ್ರಧಾನಿ ಅವರನ್ನು ಮಧ್ಯ ತರಬೇಡಿ, ನಮ್ಮನ್ನ ಕೇಳಿ. ನಾವು ಉತ್ತರಿಸುತ್ತೇವೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರಿಗೆ ಪ್ರಶ್ನೆ ಹಾಗೂ ಟೀಕೆ ಮಾಡುವ ಎಲ್ಲಾ ಹಕ್ಕುಗಳಿವೆ. ಆತ್ಮನಿರ್ಭರ ಭಾರತದ ಸಲುವಾಗಿ ವರ್ಚ್ಯುವಲ್ ರ್ಯಾಲಿಯನ್ನು ಬಿಜಿಪಿ ಮಾಡುತ್ತಿದೆ. ಸಮಾರೋಪ ಸಮಾರಂಭದಲ್ಲಿ ಬಿ.ಎಲ್. ಸಂತೋಷ್ ಅವರ ಮಾತಿಗೆ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದು ವೈಯಕ್ತಿಕವಾಗಿ ಸಂತೋಷವಾಯಿತು. ಬಿ.ಎಲ್. ಸಂತೋಷ್ ಅವರ ಭಾಷಣ ಸಿದ್ದರಾಮಯ್ಯನವರನ್ನು ಆಕರ್ಷಿಸಿದೆ ಎಂದರೆ ಭಾಷಣವನ್ನು ಪೂರ್ತಿಯಾಗಿ ಕೇಳಿದ್ದಾರೆ ಎಂದರ್ಥ ಎಂದರು.
Follow us on Social media