ಬೆಂಗಳೂರು: ಇಂದು ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮಗಳಿಗೂ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಮೊಮ್ಮಗನಿಗೂ ಮದುವೆ ನಿಶ್ಚಯವಾಗಿದೆ.
ಇಂದು ಈ ಕಾರ್ಯಕ್ರಮಕ್ಕಾಗಿ ಡಿಕೆ ಶಿವಕುಮಾರ್ ಅವರ ಮನೆಗೆ ಎಂಸ್ ಕೃಷ್ಣ ಅವರ ಕುಟುಂಬ ಆಗಮಿಸಿತ್ತು. ಮೂರು ದಿನಗಳ ಹಿಂದೆಯಷ್ಟೇ ಎಸ್‍ಎಂಕೆ ನಿವಾಸಕ್ಕೆ ಡಿಕೆಶಿ ಕುಟುಂಬ ಹೋಗಿದ್ದರು. ಇಂದು ಗುರು-ಹಿರಿಯ ಸಮ್ಮಖದಲ್ಲಿ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಸುಬ್ರಮಣ್ಯಗೂ ಮತ್ತು ಡಿಕೆಶಿ ಪುತ್ರಿ ಐಶ್ವರ್ಯಗೂ ಮದುವೆ ನಿಶ್ಚಯವಾಗಿದೆ.
ಇದೇ ತಿಂಗಳ 12ರಂದು ಡಿ.ಕೆ.ಶಿವಕುಮಾರ್ ಕುಟುಂಬದವರು ಸದಾಶಿವನಗರದ ಎಸ್.ಎಂ.ಕೃಷ್ಣ ನಿವಾಸಕ್ಕೆ ತೆರಳಿ ಮದುವೆ ಮಾತುಕತೆ ನಡೆಸಿದ್ದರು. ಕಳೆದ ಒಂದು ತಿಂಗಳಿಂದಲೂ ಡಿಕೆಶಿ ಪುತ್ರಿ ಐಶ್ವರ್ಯ ಹಾಗೂ ಉದ್ಯಮಿ ಸಿದ್ದಾರ್ಥ್ ಪುತ್ರ ಅಮರ್ಥ್ಯ ಸುಬ್ರಮಣ್ಯ ವಿವಾಹ ಸಂಬಂಧ ಎರಡು ಕುಟುಂಬಗಳು ಮಾತುಕತೆ ನಡೆಸುತ್ತಲೇ ಇದ್ದವು. ಆದರೆ ಇಂದು ಡಿಕೆಶಿ ನಿವಾಸದಲ್ಲೇ ಸರಳ ಕಾರ್ಯಕ್ರಮದಲ್ಲಿ ಹಾರವನ್ನು ಬದಲಿಸುವ ಮೂಲಕ ಮದುವೆ ನಿಶ್ಚಯ ಮಾಡಿಕೊಂಡಿದ್ದಾರೆ.
ಈಗ ಕೇವಲ ಮದುವೆ ನಿಶ್ಚಯವಾಗಿದ್ದು, ಎರಡು ಕುಟುಂಬಗಳು ತಾಂಬೂಲ ಬದಲಿಸಿಕೊಂಡಿವೆ. ಆಷಾಢ ಕಳೆದ ನಂತರ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ನಡೆಸುವ ಸಂಬಂಧ ಮಾತುಕತೆ ನಡೆದಿದೆ. ಆಗಸ್ಟ್ ತಿಂಗಳಿನಲ್ಲಿ ಒಳ್ಳೆಯ ದಿನ ನೋಡಿ ನಿಶ್ಚಿತಾರ್ಥದ ದಿನಾಂಕ ನಿಗದಿ ಆಗಲಿದೆ. ಬಹುತೇಕ ಡಿಸೆಂಬರ್ ನಲ್ಲಿ ಮದುವೆ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಗಳ ಮದುವೆ ನಿಶ್ಚಯ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅವರು, ಪಂಚೆ, ಶರ್ಟ್ ನಲ್ಲಿ ಮಿಂಚಿದ್ದಾರೆ. ಜೊತೆಗೆ ಡಿಕೆಶಿ ಪುತ್ರಿ ಐಶ್ವರ್ಯ ಪೀಚ್ ಕಲರ್ ಉಡುಗೆಯಲ್ಲಿ ಮಿಂಚಿದರೆ, ಅಮರ್ಥ್ಯ ಸುಬ್ರಮಣ್ಯ ನೀಲಿ ಬಣ್ಣದ ಶರ್ಟ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ತೊಟ್ಟು ಮಿಂಚಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇವಲ ಡಿಕೆಶಿ ಕುಟುಂಬ ಮತ್ತು ಎಸ್‍ಎಂ ಕೃಷ್ಣ ಅವರ ಕುಟುಂಬಸ್ಥರು ಹಾಗೂ ಕೆಲ ಅಪ್ತರು ಭಾಗವಹಿಸಿದ್ದರು.
Follow us on Social media