ಬೆಂಗಳೂರು: ರಾಜ್ಯ ಸರ್ಕಾರ ಖಾಸಗಿ ಶಾಲೆಗಳ ಶುಲ್ಕ ಕಡಿತಗೊಳಿಸಿರುವ ಕ್ರಮದ ವಿರುದ್ಧ 8 ಖಾಸಗಿ ಶಾಲಾ ಸಂಘಟನೆಗಳು ಸಿಡಿದೆದಿದ್ದು, ಕೂಡಲೇ ಶುಲ್ಕ ಕಡಿತ ಹಿಂಪಡೆದ ಶಿಕ್ಷಣ ಸಂಸ್ಥೆಗಳಿಗೂ ಅನುಕೂಲವಾಗುವಂತೆ ಮರು ಪರಿಶೀಲನೆ ನಡೆಸಲು ಆಗ್ರಹಿಸಿವೆ.
ಈ ಬೇಡಿಕೆಗೆ ಸರ್ಕಾರ ಜಗ್ಗದಿದ್ದರೆ, ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಈ ಕುರಿತು ಸಭೆ ನಡೆಸಿರುವ ಖಾಸಗಿ ಶಾಲೆಗಳು, ಶುಲ್ಕ ಕಡಿತ ಆದೇಶ ವಾಪಸ್ ಪಡೆಯುವುದು ಸೇರಿದಂತೆ 5 ಒತ್ತಾಯಗಳ ನಿರ್ಣಯಗಳನ್ನು ಕೈಗೊಂಡು ಅವುಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿವೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್), ಮ್ಯಾನೇಜ್ ಮೆಂಟ್ಸ್ ಆಫ್ ಇಂಡಿಪೆಂಡೆಂಟ್ ಸಿಬಿಎಸ್ಇ ಸ್ಕೂಲ್ ಅಸೋಸಿಯೇಷನ್ (ಮಿಸ್ಕಾ), ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ಕುಸ್ಮಾ), ಕರ್ನಾಟಕ ಅನುದಾನರಹಿತ ಅಲ್ಪಸಂಖ್ಯಾತ ಶಾಲೆಗಳ ಸಂಘ ಸೇರಿದಂತೆ ಎಂಟು ಸಂಘಟನೆಗಳು ಒಗ್ಗೂಡಿ ಈ ನಿರ್ಧಾರ ಕೈಗೊಂಡಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಂಎಲ್’ಸಿ ಪುಟ್ಟಣ್ಣ ಅವರು, ಸರ್ಕಾರ ಆದೇಶ ಹಿಂಪಡೆಯದೇ ಹೋದರೆ, ಶಿಕ್ಷಣ ಸಚಿವರ ಕಚೇರಿ ಬಳಿ ಧರಣಿ ಕೂರುತ್ತೇವೆಂದು ಹೇಳಿದ್ದಾರೆ.
ಈ ನಡುವೆ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಪ್ರತಿನಿಧಿಸುವ ಗ್ರಾಮೀಣ ಶಾಲೆಗಳು ಪ್ರತಿಭಟನೆಯಿಂದ ದೂರವಿರಲು ನಿರ್ಧರಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಮಾತನಾಡಿ, ಶುಲ್ಕ ಕಡಿತವು ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಣೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕ ರೋಗ ಹಿನ್ನಲೆಯಲ್ಲಿ ಶುಲ್ಕ ಪಾವತಿ ಮಾಡಲು ಸಾಕಷ್ಟು ಪೋಷಕರು ಸಂಕಷ್ಟಪಡುತ್ತಿದ್ದಾರೆ. ಹೀಗಾಗಿ ಶುಲ್ಕ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿತ್ತು. ಸಾಕಷ್ಟು ಅಧಿಕಾರಿಗಳೊಂದಿಗೂ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಸರ್ಕಾರದ ನಿರ್ಧಾರವನ್ನು ಹಲವು ಶಾಲೆಗಳು ಸ್ವಾಗತಿಸಿವೆ. ಕೆಲವು ಶಾಲೆಗಳು ಮಾತ್ರ ವಿರೋಧಿಸುತ್ತಿವೆ ಎಂದು ಹೇಳಿದ್ದಾರೆ.
ಶುಲ್ಕ ಕಡಿತಗೊಳಿಸಿದರೂ ಕೂಡ ಇಂದಿನ ವರೆಗೂ ಒಬ್ಬ ಪೋಷಕ ಕೂಡ ಶುಲ್ಕ ಪಾವತಿ ಮಾಡಲು ಮುಂದಕ್ಕೆ ಬಂದಿಲ್ಲ. ಹೀಗಾಗಿ ನಾವು ಆದೇಶ ಹಿಂಪಡೆಯುವಂತೆ ಆಗ್ರಹಿಸುತ್ತಿದ್ದೇವೆಂದು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಅವರು ಹೇಳಿದ್ದಾರೆ.
Follow us on Social media