ಬೆಳಗಾವಿ: ಇಂಧನ ದರ ಏರಿಕೆ, ಖಾದ್ಯ ತೈಲ ದರ ಏರಿಕೆಯಿಂದಾಗಿ ಒತ್ತಡದಲ್ಲಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಕಾದಿದ್ದು, ಶೀಘ್ರದಲ್ಲೇ ನಂದಿನಿ ಹಾಲಿನ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ.
ಈ ಬಗ್ಗೆ ಸ್ವತಃ ಕರ್ನಾಟಕ ಹಾಲು ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಅವರು ಹೇಳಿದ್ದು, ನಂದಿನಿ ಹಾಲಿನ ದರ ಹೆಚ್ಚಳಕ್ಕೆ 14 ಜಿಲ್ಲೆಗಳ ಹಾಲಿನ ಒಕ್ಕೂಟದವರು ಒತ್ತಡ ಮಾಡ್ತಿದ್ದಾರೆ. ಹಾಲಿನ ದರ ಹೆಚ್ಚಳ ಮಾಡಬೇಕು ಅದನ್ನೇ ರೈತರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.
ಅದನ್ನೇ ನಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಳಿ ಮನವಿ ಮಾಡಿದ್ದೇವೆ. ಸಾಧಕ ಬಾಧಕ ನೋಡಿ ಬಳಿಕ ನಿರ್ಧಾರ ತಗೆದುಕೊಳ್ಳೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳುತ್ತಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇಸಿಗೆ ಕಾಲದಲ್ಲಿ ಹಾಲು ಕಡಿಮೆ ಬರುತ್ತೆ. ಹೀಗಾಗಿ ಹೆಚ್ಚಿನ ದರ ಕೊಟ್ಟರೆ ರೈತರಿಗೆ ಅನುಕೂಲ ಆಗುತ್ತೆ. ಬೆಳಗಾವಿಯಲ್ಲಿ(Belagavi) ಆಕಳು ಹಾಲು 23 ರೂಪಾಯಿಯಷ್ಟು ಇತ್ತು 25 ರೂಪಾಯಿ ಮಾಡಿದ್ದೇವೆ. ಎಮ್ಮೆ ಹಾಲು 36 ರೂಪಾಯಿ ಇದ್ದದ್ದನ್ನು 38 ರೂಪಾಯಿಗಳಷ್ಟು ಮಾಡಿದ್ದೇವೆ.
ಇಡೀ ಭಾರತದಲ್ಲೇ(India) ನಾವು ಅತಿ ಕಡಿಮೆ ದರದಲ್ಲಿ ಹಾಲು ಮಾರುತ್ತೇವೆ. ಬೇರೆಡೆ ಹಾಲಿನ ದರ ಹೆಚ್ಚಿದೆ. ಗ್ರಾಹಕರಿಗೆ ಹೊರೆ ಆಗದ ಹಾಗೇ ಹಾಲಿನ ದರ ಹೆಚ್ಚು ಮಾಡಿದರೆ ರೈತರಿಗೆ(Farmers) ಅನುಕೂಲ ಆಗುತ್ತೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವ ನಿರ್ಧಾರ ತಗೆದುಕೊಳ್ಳುತ್ತಾರೆ ನೋಡಿ ನಾವು ನಿರ್ಣಯ ಕೈಗೊಳ್ಳುತ್ತೇವೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ.
Follow us on Social media