ಬೆಂಗಳೂರು: ವಿವಾಹಾಕಾಂಕ್ಷಿಗಳಿಗೆ, ಈಗಾಗಲೇ ವಿವಾಹ ದಿನ ನಿಶ್ಚಯವಾಗಿರುವವರಿಗೆ ರಾಜ್ಯ ಸರ್ಕಾರ ಶುಭ ಸುದ್ದಿ ಕೊಟ್ಟಿದೆ. ದೇಶದಲ್ಲಿ ಕೊರೋನಾ ಲಾಕ್‌ಡೌನ್ ಜಾರಿಯಲ್ಲಿದ್ದು ರಾಜ್ಯದಲ್ಲಿ ಬಹುವಿಧದ ರಿಯಾಯಿತಿಗಳಿದ್ದರೂ ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿರಲಿದೆ ಎಂದು ಸರ್ಕಾರ ಹೇಳಿತ್ತು. ಆದರೆ ಇದೀಗ ಭಾನುವಾರಗಳಂದು ಮದುವೆ ಸಮಾರಂಭಗಳಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಇದರಿಂದಾಗಿ ವಿವಾಹ ಸಮಾರಂಭಕ್ಕಾಗಿ ದಿನ ನಿಗದಿ ಮಾಡಿಕೊಂಡವರಿಗೆ ರಿಲ್ಯಾಕ್ಸ್ ಆಗುವಂತಾಗಿದೆ.
ಭಾನುವಾರ ಬೇರೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧವಿದ್ದರೂ ಸಹ ಇದಾಗಲೇ ನಿಶ್ಚಯವಾಗಿರುವ ವಿವಾಹ ಕಾರ್ಯಕ್ರಮಗಳನ್ನು ನಡೆಸಲು ಅಡ್ಡಿ ಇಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದೆ.
ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದು ವಿವಾಹ ಸಮಾರಂಭಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುಮತಿಸಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಂಡು 50 ಮಂದಿಯ ಗರಿಷ್ಠ ಉಪಸ್ಥಿತಿಯಲ್ಲಿ ವಿವಾಹ ನೆರವೇರಿಸಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಭಾನುವಾರ ಸಂಪೂರ್ಣ ಲಾಕ್‌ಡೌನ್ ಆಗಿರುವ ಕಾರಣ ಇದಾಗಲೇ ವಿವಾಹ ದಿನ ನಿಗದಿಯಾಗಿದ್ದವರ ಪಾಡೇನು ಎಂದು ಸರ್ಕಾರಕ್ಕೆ ಸಾರ್ವಜನಿಕರು ಅನೇಕರು ಪ್ರಶ್ನೆ ಮಾಡಿದ್ದರು. ಇದಕ್ಕೀಗ ಸರ್ಕಾರ ಮೇಲ್ಕಂಡ ಆದೇಶದ ಮೂಲಕ ಉತ್ತರ ನೀಡಿದೆ.
Follow us on Social media