ಬೆಂಗಳೂರು: ಕೊರೋನಾ ವೈರಸ್ ಹತೋಟಿಗೆ ತರಲು ಲಾಕ್ಡೌನ್ ಆದೇಶವಾದಾಗಿನಿಂದ ಪೊಲೀಸರು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ಹೀಗಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಬ್ಬಂದಿಗೆ ಕೊಂಚ ವಿಶ್ರಾಂತಿಗಾಗಿ ಸಮಯಾವಕಾಶ ನೀಡಲು ಮುಂದಾಗಿದ್ದಾರೆ.
ನಗರ ಠಾಣೆಗಳ ಪೊಲೀಸ್ ಸಿಬ್ಬಂದಿ ನಿತ್ಯ ಕೆಲಸದಲ್ಲಿ ತೊಡಗುತ್ತಿದ್ದರಿಂದ ಅವರಿಗೂ ವಿಶ್ರಾಂತಿ ನೀಡುವ ಉದ್ದೇಶದಿಂದ ಪ್ರತಿ ಠಾಣೆಯ ಮೂರನೇ ಒಂದು ಭಾಗದ ಸಿಬ್ಬಂದಿಗೆ ರಜೆ ನೀಡುವಂತೆ ಆಯುಕ್ತರು ಸೂಚಿಸಿದ್ದಾರೆ.
ಕೊರೋನಾ ಸೋಂಕಿತರು, ಶಂಕಿತರು ಇರುವ ಕಡೆ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆಗೊಳ್ಳುತ್ತಾರೆ. ಹೀಗಾಗಿ ಅವರ ಆರೋಗ್ಯದ ಹಿತ ದೃಷ್ಟಿಯಿಂದ ಸಬ್ಇನ್ಸ್ಪೆಕ್ಟರ್ ಶ್ರೇಣಿಗೆ ರಜೆ ನೀಡಲು ತೀರ್ಮಾನಿಸಲಾಗಿದೆ. ಈ ಮೂಲಕ ಸಿಬ್ಬಂದಿಗೆ ಆಯುಕ್ತರು, ಷರತ್ತುಬದ್ಧ ವಾರದ ರಜೆ ನೀಡಲು ಮುಂದಾಗಿದ್ದಾರೆ.
ಸಹಾಯವಾಣಿ ಆರಂಭ
ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗಾಗಿ ಬೆಂಗಳೂರು ನಗರ ಪೊಲೀಸರು ಸಹಾಯವಾಣಿ ಆರಂಭಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈ ಹೆಲ್ತ್ ಲೈನ್ ತೆರೆದಿದ್ದು, ಈ ಸಹಾಯವಾಣಿಯಿಂದ ಹಿರಿಯ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೊರೋನಾ ವೈರಸ್ ಲಾಕ್ ಡೌನ್ ನಿಂದ ಏಕಾಂಗಿ ಆಗಿರುವವರು, ಕೊರೋನಾ ಸೋಂಕು ಲಕ್ಷಣಗಳಿದ್ದವರು, ವೈದ್ಯರನ್ನು ಸಂಪರ್ಕಿಸಲು, ಮೆಡಿಕಲ್ ತುರ್ತು ಸೇವೆ, ಅಂಬುಲೆನ್ಸ್ ಸೇವೆ ಬೇಕಿರುವವರು, ವಿದ್ಯುತ್, ವಾಟರ್, ಗ್ಯಾಸ್ ಸಿಲಿಂಡರ್ ಸಿಗದೇ ತೊಂದರೆಗೀಡಾದವರು, ಪೆನ್ಷನ್, ಬ್ಯಾಂಕಿಂಗ್ ಮಾಹಿತಿ ಬೇಕಿರುವವರು, ದಿನಸಿ ವಸ್ತುಗಳು ಮೆಡಿಸಿನ್ ಬೇಕಿರುವವರು ಈ ಕೆಳಗಿನ ಸಹಾಯವಾಣಿಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದಾಗಿದೆ.
ಸಹಾಯವಾಣಿ 1090/100 ಕರೆ ಮಾಡಿ ಈ ಸೌಲಭ್ಯ ಪಡೆಯಬಹುದಾಗಿದೆ. ಇದರೊಂದಿಗೆ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ತಂಡ ರಚಿಸಿದ್ದು, ಈ ಸೇವೆ ಪಡೆಯಬಹುದು. ಇನ್ನುಳಿದಂತೆ ಕರ್ನಾಟಕ 104, 180-46848600 , 1075 , 08022 40676 ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಇದರ ಸಹಾಯ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
Follow us on Social media