ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ ಎಂದು ಬಲವಾಗಿ ಪ್ರತಿಪಾದಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಾಲಿ ಜಾರಿಯಲ್ಲಿರುವ ಲಾಕ್ ಡೌನ್ ಮುಂದುವರೆಸುವ ಯಾವುದೇ ಯೋಚನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಂಕು ಹೆಚ್ಚಾಗುತ್ತಿರುವ ನಗರದಲ್ಲಿ ಕೋವಿಡ್ ಪರಿಸ್ಥಿತಿ ಹಾಗೂ ನಿರ್ವಹಣೆ ಕುರಿತು ಎಂಟು ವಲಯಗಳ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ಚರ್ಚಿಸಿದ ಸಂದರ್ಭದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕೋವಿಡ್ 19 ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ದಾಖಲಾಗಲು ಆಗುತ್ತಿರುವ ತೊಡಕು ನಿವಾರಿಸಲು ತಕ್ಷಣವೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸೋಂಕಿತರು ಆಸ್ಪತ್ರೆಗಳಿಗೆ ಅಲೆದಾಡುವಂತಾಗಬಾರದು ಎಂದು ಆದೇಶಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಬೆಡ್ ನೀಡದೆ ಇದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ದಾಖಲಾತಿ ಮತ್ತು ಹಾಸಿಗೆಗಳ ಲಭ್ಯತೆ ಕುರಿತು ಮಾಹಿತಿ ಒದಗಿಸಲು ಸ್ವಯಂ ಸೇವಕರು ಹಾಗೂ ನೋಡಲ್ ಅಧಿಕಾರಗಳನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ ನಡೆಸಿ, ಕೋವಿಡ್ ಹಾಗೂ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ದೊರಕುವುದನ್ನು ಖಾತರಿಪಡಿಸಿಕೊಳ್ಳಬೇಕು.ರೋಗ ಲಕ್ಷಣ ಇಲ್ಲದ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸದೆ,ಕೋವಿಡ್ ಕೇರ್ ಸೆಂಟರ್ ಗಳಿಗೆ ಅಥವಾ ಹೋಮ್ ಕ್ವಾರಂಟೈನ್ ನಲ್ಲಿರಿಸಬೇಕು. ತೀವ್ರತರ ರೋಗಲಕ್ಷಣದಿಂದ ಬಳಲುತ್ತಿರುವ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ವ್ಯವಸ್ಥೆ ಮಾಡಬೇಕು,ರೋಗ ಲಕ್ಷಣ ಇರುವ, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮೊದಲ ಆದ್ಯತೆಯ ಮೇರೆಗೆ ಹಾಸಿಗೆ ಹಂಚಿಕೆ ಮಾಡಬೇಕು. ರೋಗಲಕ್ಷಣ ಇಲ್ಲದವರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆ ಯಲ್ಲಿ ಮೃತರಾದವರಿಗೆ ರಾಪಿಡ್ ಆಂಟಿಜೆನ್ ಪರೀಕ್ಷೆ ನಡೆಸಿ ಶವವನ್ನು ಕೂಡಲೇ ಹಸ್ತಾಂತರಿಸಬೇಕು. ಕೋವಿಡ್ ಸೋಂಕು ಕಂಡು ಬಂದಲ್ಲಿ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲು ಕ್ರಮ ವಹಿಸಬೇಕು.ಮನೆಯಲ್ಲಿ ಮೃತರಾದವರಿಗೂ ರಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಿ ಮೃತದೇಹವನ್ನು ತುರ್ತಾಗಿ ಅಂತ್ಯಕ್ರಿಯೆ ನಡೆಸಲು ಕ್ರಮ ವಹಿಸುವಂತೆ ಯಡಿಯೂರಪ್ಪ ನಿರ್ದೇಶನ ನೀಡಿದರು.
ವೈದ್ಯರ ಕೊರತೆ ನಿವಾರಿಸಲು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ವಾರ್ಡಿನಲ್ಲೂ ಸ್ವಯಂ ಸೇವಕರನ್ನು ಗುರುತಿಸಲಾಗಿದ್ದು, ಸೂಕ್ತ ಪ್ರಮಾಣದಲ್ಲಿ ಅಂಬ್ಯುಲೆನ್ಸ್ ನಿಗದಿ ಪಡಿಸಲಾಗಿದೆ. ಪ್ರತಿ ವಾರ್ಡ್ ಗಳಲ್ಲಿ ಕಲ್ಯಾಣ ಮಂಟಪ, ವಸತಿ ಗೃಹಗಳನ್ನು ಗುರುತಿಸಲಾಗಿದ್ದು, ಪ್ರತ್ಯೇಕವಾಗಿ ವಾಸಿಸಲು ಕೊಠಡಿಗಳು ಇಲ್ಲದವರಿಗೆ ಕ್ವಾರಂಟೈನ್ ಮಾಡಲು ಈ ಕಲ್ಯಾಣ ಮಂಟಪಗಳನ್ನು ಬಳಸಿಕೊಳ್ಳುವಂತೆ ಹೇಳಿದರು.
ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವಂತೆ ಮುಖ್ಯಮಂತ್ರಿಯವರು ನಿರ್ದೇಶನ ನೀಡಿದ ಯಡಿಯೂರಪ್ಪ, ಜನ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವ ಸಾಧ್ಯತೆಗಳಿರುವ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸರ್ಕಾರದ ಮಾರ್ಗ ಸೂಚಿ ಪಾಲನೆಗೆ ಒತ್ತು ನೀಡುವಂತೆ ಸಲಹೆ ಮಾಡಿದರು.
ಪರೀಕ್ಷೆಯ ಫಲಿತಾಂಶ ದೊರೆತ ಎರಡು ಗಂಟೆಗಳೊಳಗೆ ಹಾಸಿಗೆ ಹಂಚಿಕೆ ಮಾಡಿ, ತಕ್ಷಣವೇ ಅಂಬ್ಯುಲೆನ್ಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಕ್ರಮ ವಹಿಸಬೇಕು. ಈ ವ್ಯವಸ್ಥೆಯನ್ನು ವೀಕೇಂದ್ರೀಕರಿಸಿ, ವಲಯವಾರು, ಮೇಲ್ವಿಚಾರಣೆ ನಡೆಸುವಂತೆ ಮುಖ್ಯಮಂತ್ರಿ ಸೂಚಿಸಿದರು.
Follow us on Social media