ಬೆಂಗಳೂರು: ಪಕ್ಷದಿಂದ ಯುವ ನಾಯಕರು ಹಾಗೂ ಯುವಕರು ಹೊರಹೋದರೆ ಯಾವುದೇ ನಷ್ಟವಿಲ್ಲ ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿ ಸಮಾವೇಶದಲ್ಲಿ ಕಾಂಗ್ರೆಸ್‌ನ ಯುವ ನೇತಾರರಾದ ರಾಹುಲ್ ಗಾಂಧಿಯವರು ಹೇಳಿರುವುದು ಅವರ “ಯುವ ವಿರೋಧಿ ಮನಸ್ಥಿತಿ”ಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕಟೀಲ್, ಇದು ಅವರ ಪಕ್ಷದ ಆಂತರಿಕ ವಿಚಾರವಾದರೂ, ತಾತ್ವಿಕ ಹಾಗೂ ಸಾಮಾಜಿಕ ನೆಲೆಗಟ್ಟಿನಲ್ಲಿ ಅವರ ಹೇಳಿಕೆಯನ್ನು ಗಮನಿಸಿದರೆ, ಪಕ್ಷದಿಂದ ಯುವ ಸಮುದಾಯ ಹೊರ ಹೋದರೆ ಅದರಿಂದ ತಮಗೇನೂ ತೊಂದರೆಯಾಗುವುದಿಲ್ಲ ಎನ್ನುವುದು ಯುವಕರೆಡೆಗಿನ ತಾತ್ಸಾರ ಹಾಗೂ ತಿರಸ್ಕಾರ ಮನೋಭಾವವನ್ನು ಹೊರಗೆಡವುತ್ತದೆ. ಇದು ಯುವಕರೆಡೆಗೆ ರಾಹುಲ್ ಗಾಂಧಿಯವರು ಹೊಂದಿರುವ ಸಿಟ್ಟನ್ನು ಹೊರಹಾಕಿದೆ ಎಂದರೂ ತಪ್ಪಾಗದು.
ಯಾವುದೇ ಸಂಘಟನೆಯಾದರೂ ಯುವಕರೇ ಜೀವಾಳ ಎಂದು ಭಾವಿಸುವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಯುವ ವಿರೋಧಿ ಹೇಳಿಕೆಗಳ ಮೂಲಕ, ಇಂದಿಗೂ ಊಳಿಗಮಾನ್ಯ ಹಾಗೂ ಪ್ರಭುತ್ವಶಾಹಿ ಮನಸ್ಥಿತಿಯು ತಮ್ಮೊಳಗಿನ್ನೂ ಜೀವಂತವಾಗಿದೆ. ಅದನ್ನು ಯರೂ ಪ್ರಶ್ನಿಸಬಾರದು ಎಂದು ಸಾರ್ವಜನಿಕವಾಗಿ ತೋರಿಸಿಕೊಂಡಿದ್ದಾರೆ.
ಅಲ್ಲದೇ ತಮ್ಮದೇ ಪಕ್ಷದೊಳಗೆ ಹಾಗೂ ದೇಶದಲ್ಲಿರುವ ಯುವ ಸಮುದಾಯವನ್ನು ತಿರಸ್ಕಾರ ಭಾವನೆಯಿಂದ ನೋಡಿದ್ದಾರೆ ಎಂದು ಟೀಕಿಸಿದ್ದಾರೆ.
Follow us on Social media