ಬೆಂಗಳೂರು: ಪ್ರಾಮಾಣಿಕ ರಾಜಕಾರಣಿ ಸೃಷ್ಟಿ ಜನರ ಕೈಯಲ್ಲಿದೆ. ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಜನರು ಆದಷ್ಟುಬೇಗ ಹೊರಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಪಕ್ಷದ ಮುಖಂಡರ ಜೊತೆ ಪ್ರಚಾರ ನಡೆಸಿ ಕುಮಾರಸ್ವಾಮಿ ಮಾತನಾಡಿದರು.
ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದ್ದರೆ ಈಗೇಕೆ ಸೀರೆ, ಹಣ ಹಂಚುವ ಪ್ರಮೇಯ ಬರುತ್ತಿತ್ತು. ಗೊತ್ತಿದ್ದು, ಗೊತ್ತಿದ್ದು ಕಾಂಗ್ರೆಸ್‌ನವರು ತಪ್ಪು ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 6.5 ಕೋಟಿ ಕನ್ನಡಿಗರ ಭರವಸೆ ಈಡೇರಿಸಿಲ್ಲ. ಬದಲಾಗಿ ಅವರನ್ನು ಮುಖ್ಯಮಂತ್ರಿ ಮಾಡಲು ಬೆಂಬಲ ನೀಡಿದ 17 ಶಾಸಕರ ಭರವಸೆ ಮಾತ್ರ ಈಡೇರಿಸಿದ್ದಾರೆ.
ಬಿಜೆಪಿ ಪಕ್ಷ ಎರಡು ಕ್ಷೇತ್ರಗಳಲ್ಲಿ ಆರ್ಭಟದ ಪ್ರಚಾರ ನಡೆಸುತ್ತಿದೆ. ಆದರೆ, ಅಲ್ಲಿಗೆ ಬರುತ್ತಿರುವ ಯಾರು ಸ್ಥಳೀಯರಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಈಗಾಗಲೇ ಎರಡು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ ಎಂದು ಯಡಿಯೂರಪ್ಪ ಹೇಳುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದರು.
Follow us on Social media