ಚಾಮರಾಜನಗರ: ರಾಜ್ಯದ ಪ್ರತಿ ಹೆಣ್ಣುಮಕ್ಕಳಿಗೆ ಉಚಿತವಾಗಿ ಮೈತ್ರಿ ಮುಟ್ಟಿನ ಕಪ್‌ಗಳನ್ನು ನೀಡುವ ಚಿಂತನೆ ಸರ್ಕಾರಕ್ಕಿದೆ. ಪ್ರಾಯೋಗಿಕ ಯೋಜನೆ ಪೂರ್ಣಗೊಂಡ ಬಳಿಕ ಈ ಕ್ರಮ ವಹಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ, ‘ಮೈತ್ರಿ ಮುಟ್ಟಿನ ಕಪ್- ಶುಚಿ ಯೋಜನೆಯ’ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮುಟ್ಟು ಎನ್ನುವುದು ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಸಹಜವಾಗಿ ಆಗುವ ಪ್ರಕ್ರಿಯೆ. ಶೇ.70 ರಷ್ಟು ಹೆಣ್ಣುಮಕ್ಕಳು ಹಾಗೂ ತಾಯಂದಿರು ಇದನ್ನು ಹೇಳಿಕೊಳ್ಳಲು ಈಗಲೂ ಮುಜುಗರಪಡುತ್ತಾರೆ. ಇದು ಒಂದು ರೀತಿ ಸಾಮಾಜಿಕ ಪಿಡುಗಾಗಿದೆ. ಹದಿಹರಯದ ಹೆಣ್ಣುಮಕ್ಕಳು ಈ ವಿಚಾರದಲ್ಲಿ ಆತಂಕಕ್ಕೊಳಗಾಗಬಾರದು, ನಾಚಿಕೆ ಪಟ್ಟುಕೊಳ್ಳಬಾರದು. ಮುಟ್ಟಿನ ಬಗ್ಗೆ ಧೈರ್ಯವಾಗಿ ಮನೆಯವರೊಂದಿಗೆ ಅಭಿಪ್ರಾಯ ಹಂಚಿಕೊಳ್ಳಬಹುದು ಎಂದರು.
ಇಂದಿನ ಆಧುನಿಕ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್ ಇರುವುದರಿಂದ, ಅದು ಮಣ್ಣಿನಲ್ಲಿ ಕರಗಲು 600-800 ವರ್ಷಗಳು ಬೇಕಾಗುತ್ತವೆ. ಆದರೆ ಈ ಮುಟ್ಟಿನ ಕಪ್‌ಗಳು ಪರಿಸರ ಸ್ನೇಹಿಯಾಗಿವೆ. ಒಂದು ಕಪ್ ಅನ್ನು 6 ರಿಂದ 10 ವರ್ಷಗಳ ಕಾಲ ಬಳಸಬಹುದು. ಇದರಿಂದ ಹಣವೂ ಉಳಿತಾಯವಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ಹೆಣ್ಣುಮಕ್ಕಳಿಗೆ ಇದನ್ನು ಉಚಿತವಾಗಿ ನೀಡಲು ಚಿಂತಿಸಿದೆ. ಸದ್ಯಕ್ಕೆ ಇದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ ಎಂದು ವಿವರಿಸಿದರು.
ಋತುಚಕ್ರದ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಹಿಂದೆ ಹೆಣ್ಣುಮಕ್ಕಳು ಮುಟ್ಟಿನ ವೇಳೆ ಬಟ್ಟೆ ಬಳಸುತ್ತಿದ್ದು, ಅದು ಸುರಕ್ಷಿತವಾಗಿರಲಿಲ್ಲ. ಅದು ಅನೇಕ ರೋಗಗಳು ಬರಲು ಕಾರಣವಾಗುತ್ತಿತ್ತು. ಹೆಣ್ಣುಮಕ್ಕಳು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್ ಬಳಸುತ್ತಾರೆ. ಆದರೆ ಸ್ಯಾನಿಟರಿ ಪ್ಯಾಡ್‌ನಿಂದ ಕಸದ ಸಮಸ್ಯೆ ಹೆಚ್ಚಾಗಿದೆ ಹಾಗೂ ಇದು ಪರಿಸರಕ್ಕೆ ಹಾನಿಯಾಗುತ್ತದೆ. ಅಲ್ಲದೆ, ಹೆಣ್ಣುಮಕ್ಕಳು ಅನೇಕ ಬಾರಿ ಪ್ಯಾಡ್ ಬದಲಿಸಬೇಕಾಗುತ್ತದೆ. ಸರ್ಕಾರ ನೀಡುತ್ತಿರುವ ಮುಟ್ಟಿನ ಕಪ್‌ಗಳು ಈ ಸಮಸ್ಯೆಗಳನ್ನು ನಿವಾರಿಸಲಿದೆ ಎಂದರು.
ತಾಯಿಯ ಹೃದಯವನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರ, ತಾಯಿಯಂತೆ ಹೆಣ್ಣುಮಕ್ಕಳ ಬಗ್ಗೆ ವಿಚಾರ ಮಾಡಿ ಈ ಯೋಜನೆಯನ್ನು ಜಾರಿ ಮಾಡಿದೆ. ಬುಡಕಟ್ಟು ಜನಾಂಗವಿರುವ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡು ಇಲ್ಲಿಯೇ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಆರಂಭದಲ್ಲಿ ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಗಡಿಭಾಗದಲ್ಲಿರುವ ಒಂದು ಜಿಲ್ಲೆ ಹಾಗೂ ಹೆಚ್ಚು ಶಿಕ್ಷಿತರಿರುವ ಒಂದು ಜಿಲ್ಲೆಯನ್ನು ಈ ಯೋಜನೆಗೆ ಆರಿಸಲಾಗಿದೆ. ನಮ್ಮ ರಾಜ್ಯ ಆರೋಗ್ಯವಂತ ರಾಜ್ಯವಾದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ರಾಜ್ಯ ಸರ್ಕಾರ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಕೆಲಸವನ್ನು ಬದ್ಧತೆಯಿಂದ ಮಾಡಲಿದೆ ಎಂದು ತಿಳಿಸಿದರು.
ಪೊರಕೆ ಹಿಡಿದು ಗುಡಿಸಿದರೆ ದೇಶ ಸ್ವಚ್ಛವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛತಾ ಅಭಿಯಾನದ ಬಗ್ಗೆ ಅನೇಕರು ತಮಾಷೆ ಮಾಡಿದ್ದರು. ಆದರೆ ಕಳೆದ ಎಂಟು ವರ್ಷಗಳಲ್ಲಿ 10 ಕೋಟಿ ಶೌಚಾಲಯ ನಿರ್ಮಾಣವಾಗಿದೆ. ಇದರಿಂದಾಗಿ ಮಹಿಳೆಯರು ಸ್ವಾಭಿಮಾನದಿಂದ ಬದುಕುವಂತಾಗಿದೆ ಎಂದರು.
ನರ್ಸ್ ನೇಮಕಾತಿ
ಆದಿವಾಸಿ ಸೋಲಿಗ ಸಮುದಾಯದವರಲ್ಲಿ ನರ್ಸಿಂಗ್ ವ್ಯಾಸಂಗ ಮಾಡಿದವರಿಗೆ, ವಿಶೇಷ ನೇಮಕಾತಿ ಅಥವಾ ಮೀಸಲಾತಿ ಮೂಲಕ ನರ್ಸ್‌ಗಳನ್ನಾಗಿ ನೇಮಿಸಲು ಕ್ರಮ ವಹಿಸಲಾಗುವುದು. ಹಾಗೆಯೇ ಆಶಾ ಕಾರ್ಯರ್ತೆಯರನ್ನು ನೇಮಕ ಮಾಡುವಾಗಲೂ ಈ ಸಮುದಾಯವನ್ನು ವಿಶೇಷವಾಗಿ ಪರಿಗಣಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಹೊಸ ಆಸ್ಪತ್ರೆ
ಯಳಂದೂರು ತಾಲೂಕಿಗೆ ಹೊಸ ಆಸ್ಪತ್ರೆಯನ್ನು ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಜಿಲ್ಲೆಯ ಎರಡು ಕ್ಷೇತ್ರಗಳ ಆಸ್ಪತ್ರೆಗಳಿಗೆ ಡಯಾಲಿಲಿಸ್ ಯಂತ್ರಗಳನ್ನು ಕೂಡ ನೀಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.