ಬೆಂಗಳೂರು : ಕೊರೋನಾವೈರಸ್ ಕರ್ನಾಟಕದಲ್ಲಿ ದಿನದಿನಕ್ಕೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದ್ದು ಗುರುವಾರ ಮಧ್ಯಾಹ್ನದ ವೇಳೆಗೆ ರಾಜ್ಯದಲ್ಲಿ ಮತ್ತೆ 22 ಮಂದಿಗೆ ಸೋಂಕು ತಗುಲಿದೆ. ಅಲ್ಲದೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ತಲಾ ಒಬ್ಬರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.
ರಾಜ್ಯದ ಒಟ್ತಾರೆ ಸೋಂಕಿತರ ಸಂಖ್ಯೆ 981ಕ್ಕೆ ತಲುಪಿದ್ದು ಸಾವನ್ನಪ್ಪಿರುವವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 80 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಏ.26ರಂದು ಪಾರ್ಶ್ವವಾಯುವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರಲ್ಲಿ ಸೊಂಕು ಪತ್ತೆಯಾಗಿದ್ದರಿಂದ ಐಸಿಯುಗೆ ವರ್ಗಾಯಿಸಲಾಗಿತ್ತು. ಗುರುವಾರ ಬೆಳಗ್ಗೆ ಅವರು ಸೆಪ್ಟಿಕ್ ಶಾಕ್ ನಿಂದ ಮೃತಪಟ್ಟಿದ್ದಾರೆ.
ನ್ಯುಮೋನಿಯಾ ಮತ್ತು ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಆಂದ್ರಪ್ರದೇಶದ ಅನಂತಪುರದ 60 ವರ್ಷದ ವೃದ್ಧ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಕಡಿಮೆ ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ನಿನ್ನೆ ಸಂಜೆಯಿಂದ ಇಂದಿನ ಮಧ್ಯಾಹ್ನದವರೆಗೆ ಐವರು ಕೊರೋನಾ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಡನೆ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 456ಕ್ಕೆ ತಲುಪಿದೆ.
ಇಂದು ಬೆಂಗಳೂರು ಪಾದರಾಯನಪುರದ ಮತ್ತೆ ಐವರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದರಲ್ಲಿ ನಾಲ್ವರು ರೋಗಿ ಸಾಂಖ್ಯೆ 554ನ ನಿಕಟ ಸಂಪರ್ಕಕ್ಕೆ ಬಂದಿದ್ದರು.
ಬೆಳಗಾವಿಯ 27 ವರ್ಷದ ಗರ್ಭಿಣಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರು ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ ಹಿನ್ನೆಲೆ ಹೊಂದಿದ್ದು, ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಮಂಡ್ಯ, ಬೀದರ್, ಗದಗ ಜಿಲ್ಲೆಗಳಲ್ಲಿ ತಲಾ ನಾಲ್ಕು, ದಾವಣಗೆರೆಯಲ್ಲಿ ಮೂವರು, ಬಾಗಲಕೋಟೆಯಲ್ಲಿ ತಲಾ ಒಬ್ಬರಿಗೆ ಕೊರೋನಾ ದೃಢಪಟ್ಟಿದೆ.
Follow us on Social media