ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಮಂಗಳವಾರ ಮಹಾಮಾರಿಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 66ಕ್ಕೇರಿಕೆಯಾಗಿದೆ.
ಇಂದು ಮತ್ತೆ 161 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5921ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 164 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
161 ಸೋಂಕಿತರ ಪೈಕಿ 91 ಮಂದಿ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, 24 ಮಂದಿ ಅಂತಾರಾಷ್ಟ್ರೀಯ ಪ್ರಯಾಣದಿಂದ ಮರಳಿದ್ದಾರೆ.
ಇಲ್ಲಿಯವರೆಗೆ 2605 ಮಂದಿ ಗುಣಮುಖರಾಗಿದ್ದು, 3248 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 12 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದ 65 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಜೂನ್ 3ರಂದು ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ರಕ್ತದೊತ್ತಡ, ಮಧುಮೇಹ, ಕಿಡ್ನಿ ತೊಂದರೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇವರು ಸೋಮವಾರ ಮೃತಪಟ್ಟಿದ್ದಾರೆ.
ಕಲಬುರಗಿಯ 17 ವರ್ಷದ ಯುವತಿ ಸೋಂಕಿನ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇವರು ಜ್ವರ, ತಲೆನೋವು, ಉಸಿರಾಟದ ತೊಂದರೆ ಮತ್ತು ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಜೂ.4ರಂದು ಆಸ್ಪತ್ರೆಗೆ ದಾಖಲಾದ ಇವರು ಅದೇ ದಿನ ಮರಣ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಯಾದಗಿರಿಯಲ್ಲಿ 61, ಬೆಂಗಳೂರು ನಗರದಲ್ಲಿ 29, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 23, ಕಲಬುರಗಿಯಲ್ಲಿ 10, ಬೀದರ್ ನಲ್ಲಿ 9, ದಾವಣಗೆರೆಯಲ್ಲಿ 8, ಕೊಪ್ಪಳದಲ್ಲಿ 6, ಶಿವಮೊಗ್ಗದಲ್ಲಿ 4, ವಿಜಯಪುರ, ಚಿಕ್ಕಬಳ್ಳಾಪುರ, ಮೈಸೂರು ಮತ್ತು ಧಾರವಾಡದಲ್ಲಿ ತಲಾ 2, ಬಾಗಲಕೋಟೆ, ತುಮಕೂರು, ಚಾಮರಾಜನಗರದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.
Follow us on Social media