ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದ್ದು, ಗುರುವಾರ ಒಂದೇ ದಿನವೇ ರಾಜ್ಯದಲ್ಲಿ ಹೊಸದಾಗಿ ೩೬ ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ೩೧೫ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಈವರೆಗೆ ೧೩ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಮತ್ತು ೮೨ ಮಂದಿ ಚಿಕಿತ್ಸೆ ನಂತರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ೬೬ ವರ್ಷದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸಾವನ್ನಪ್ಪಿರುವವರ ಸಂಖ್ಯೆ ೧೩ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಇಂದು ಸಂಜೆ ಕಲಬುರಗಿಯ 5 ವರ್ಷದ ಬಾಲಕ ಹಾಗೂ 32 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.
ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಬೆಳಗಾವಿಯಲ್ಲಿ ೧೭, ವಿಜಯಪುರದಲ್ಲಿ ೭, ಮೈಸೂರಿನಲ್ಲಿ ೩, ಕಲಬುರಗಿಯಲ್ಲಿ ೨ ಸೇರಿದಂತೆ ಒಟ್ಟು ರಾಜ್ಯಾದ್ಯಂತ ೩೬ ಪ್ರಕರಣಗಳು ದೃಢಪಟ್ಟಿವೆ.
ಬೆಂಗಳೂರು ನಗರದಲ್ಲಿ ೭೬, ಮೈಸೂರು ೬೧, ಬೆಳಗಾವಿ ೩೬, ಕಲಬುರಗಿ ೨೦, ವಿಜಯಪುರ ೧೭, ಬಾಗಲಕೋಟೆ೧೪, ಬೀದರ್ ಮತ್ತು ಚಿಕ್ಕಬಳ್ಳಾಪುರ ತಲಾ ೧೩, ಬೆಂಗಳೂರು ಗ್ರಾಮಾಂತರ-೧೨, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ತಲಾ ೧೧, ಮಂಡ್ಯ ೮, ಬಳ್ಳಾರಿ ಮತ್ತು ಧಾರವಾಡ ತಲಾ ೬, ಉಡುಪಿ ೩, ದಾವಣಗೆರೆ ಗದಗ ಮತ್ತು ತುಮಕೂರು ತಲಾ ೨, ಚಿತ್ರದುರ್ಗ ಮತ್ತು ಕೊಡಗು ತಲಾ ೧ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಸೋಂಕು ೨೦ ಜಿಲ್ಲೆಗಳಿಗೆ ವ್ಯಾಪಿಸಿದೆ.
Follow us on Social media