ಬೆಂಗಳೂರು: ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್ ಆರ್ಭಟ ಇಂದೂ ಕೂಡ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಒಟ್ಟು 213 ಮಂದಿಗೆ ಕೊರೋನಾ ವೈರಸ್ ಒಕ್ಕರಿಸಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 213 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 7213ಕ್ಕೆ ಏರಿಕೆಯಾಗಿದೆ. ಅಂತೆಯೇ ಇಂದೂ ಕೂಡ ರಾಜ್ಯದಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ. ಇತರೆ ಕಾರಣಗಳಿಂದ ಸಾವನ್ನಪ್ಪಿದ ಕೊರೋನಾ ಸೋಂಕಿತರ ಸಂಖ್ಯೆ 3ಕ್ಕೇರಿದೆ.
ಇನ್ನು ರಾಜ್ಯಾದ್ಯಂತ ಇಂದು ಒಟ್ಟು 180 ಮಂದಿ ಸೋಂಕಿತರು ಗುಣಮುಖರಾದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಆ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ನಿಂದ ಗುಣಮುಖರಾದವರ ಸಂಖ್ಯೆ 4135ಕ್ಕೆ ಏರಿಕೆಯಾಗಿದೆ. ಉಳಿದಂತೆ ರಾಜ್ಯದಲ್ಲಿ ಪ್ರಸ್ತುತ 2987 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ಗಂಭೀರ ಸ್ಥಿತಿಯಲ್ಲಿರುವ 56 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 23 ಮಂದಿ ಸೋಂಕಿತರು ಅಂತಾರಾಷ್ಚ್ರೀಯ ಪ್ರಯಾಣಿಕರಾಗಿದ್ದು, 103 ಮಂದಿ ಸೋಂಕಿತರು ಅಂತರ್ ರಾಜ್ಯ ಪ್ರಯಾಣ ಹಿನ್ನಲೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದು ಪತ್ತೆಯಾದ 213 ಹೊಸ ಪಾಸಿಟಿವ್ ಪ್ರಕರಣ ಗಳ ಪೈಕಿ ಬೆಂಗಳೂರಿನಲ್ಲಿ ಇಂದು 35 ಮಂದಿಗೆ ಸೋಂಕು ತಗುಲಿದ್ದು, ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ಶಿವಮೊಗ್ಗಕ್ಕೆ ತೆರಳಿದ್ದ ಪೊಲೀಸ್ ಕಾನ್‍ಸ್ಟೇಬಲ್ ಗೆ ಸೋಂಕು ತಗುಲಿದೆ.
ಉಳಿದಂತೆ ಕಲಬುರಗಿ 48, ಧಾರವಾಡ 34, ದಕ್ಷಿಣ ಕನ್ನಡ 23, ರಾಯಚೂರು 18, ಯಾದಗಿರಿ 13, ಬೀದರ್ 11, ಬಳ್ಳಾರಿ 10, ಕೊಪ್ಪಳ 4, ವಿಜಯಪುರ 3, ಬಾಗಲಕೋಟೆ 3, ಶಿವಮೊಗ್ಗ 3, ಉಡುಪಿ 2, ಹಾವೇರಿ 2, ರಾಮನಗರ 2, ಹಾಸನ 1 ಮತ್ತು ದಾವಣಗೆರೆಯಲ್ಲಿ 1 ಪಾಸಿಟಿವ್ ಪ್ರಕರಣ ದಾಖಲಾಗಿದೆ.
Follow us on Social media