ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ ಏಳು ಮಂದಿ ಮಹಾಮಾರಿಗೆ ಬಲಿಯಾಗಿದ್ದು, ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 79ಕ್ಕೇರಿಕೆಯಾಗಿದೆ.
ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ನಾಲ್ವರು, ಕಲಬುರಗಿಯಲ್ಲಿ ಇಬ್ಬರು ಹಾಗೂ ಹಾಸನದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಹೊಸದಾಗಿ 271 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6516ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಕೂಡ ಉತ್ತಮವಾಗಿದ್ದು, ಗುರುವಾರ 464 ಮಂದಿ ಗುಣಮುಖರಾಗಿದ್ದಾರೆ. ಇದರಿಂದ ಚೇತರಿಕೆ ಕಂಡವರ ಸಂಖ್ಯೆ 3440ಕ್ಕೇರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 2995 ಸಕ್ರಿಯ ಪ್ರಕರಣಗಳಿದ್ದು, 19 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ಪತ್ತೆಯಾದ 271 ಸೋಂಕಿತರ ಪೈಕಿ 92 ಮಂದಿ ಹೊರರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದು, 14 ಮಂದಿ ವಿದೇಶ ಪ್ರಯಾಣದ ಇತಿಹಾಸ ಹೊಂದಿದ್ದಾರೆ.
ಬಳ್ಳಾರಿ 97, ಬೆಂಗಳೂರು 36, ಉಡುಪಿ 22, ಕಲಬುರ್ಗಿ 20, ಧಾರವಾಡ 19, ದಕ್ಷಿಣ ಕನ್ನಡ 17, ಬೀದರ್ 10, ಹಾಸನ 9, ಮೈಸೂರು 9, ತುಮಕೂರು 7, ಶಿವಮೊಗ್ಗ 6, ರಾಯಚೂರು 4, ಉತ್ತರ ಕನ್ನಡ 4, ಚಿತ್ರದುರ್ಗ 3, ರಾಮನಗರ 3, ಮಂಡ್ಯ 2, ಬೆಳಗಾವಿ, ವಿಜಯಪುರ, ಯಾದಗಿರಿಯಲ್ಲಿ ತಲಾ ಒಂದು ಕೊರೋನಾ ಪ್ರಕರಣಗಳು ವರದಿಯಾಗಿವೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಬೆಂಗಳೂರು ನಗರದ 61 ವರ್ಷದ ಮಹಿಳೆ, 52 ವರ್ಷದ ಪುರುಷ, 49 ವರ್ಷದ ಮಹಿಳೆ, ಹಾಸನದ 60 ವರ್ಷದ ವ್ಯಕ್ತಿ ಹಾಗೂ ಕಲಬುರಗಿಯಲ್ಲಿ 53 ವರ್ಷದ ಮತ್ತು 46 ವರ್ಷದ ಪುರುಷರು ಸೋಂಕಿನಿಂದ ಮೃತಪಟ್ಟಿದ್ದಾರೆ.
Follow us on Social media