ಕಲಬುರಗಿ: ಯಾವುದೇ ಕಾರಣಕ್ಕೂ ತೆರಿಗೆ ಮನ್ನಾ ಮಾಡುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ತಿಳಿಸಿದ್ದಾರೆ. ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ನಗರ ಪ್ರದಕ್ಷಿಣೆ ಮಾಡಿ, ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರಿಗೆ ಕಟ್ಟಲು ಜನರಿಗೆ ತೊಂದರೆಯಾದರೆ, ತೆರಿಗೆ ಪಾವತಿ ಮಾಡುವ ಅವಧಿ ವಿಸ್ತರಿಸಲಾಗುವುದು. ಆದರೆ, ಯಾವುದೇ ಕಾರಣಕ್ಕೂ ತೆರಿಗೆ ಮನ್ನಾ ಮಾಡುವುದಿಲ್ಲ. ಜನರ ತೆರಿಗೆಯ ಹಣವನ್ನು ಸರ್ಕಾರ ಸ್ವಂತಕ್ಕೆ ಬಳಸಿಕೊಳ್ಳುವುದಿಲ್ಲ. ಆಯಾ ಜಿಲ್ಲೆಗಳ ಅಭಿವೃದ್ಧಿಗೆ ಉಪಯೋಗಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ವಿಚಾರದ ಬಗ್ಗೆ ಮಾತನಾಡಿ, ಲಾಕ್ಡೌನ್ ಜಾರಿ ಮಾಡೋದು ಸಿಎಂಗೆ ಬಿಟ್ಟ ವಿಚಾರ. ಕೇಂದ್ರದ ಜೊತೆ ಚರ್ಚಿಸಿ ಸಿಎಂ ಅವರೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಮಹಾನಗರ ಪಾಲಿಕೆ ಆಯುಕ್ತರು ಸಹ ಅತ್ಯಂತ ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಅಪ್ಪಾ ಕೆರೆ ಅಭಿವೃದ್ಧಿಪಡಿಸಲು ನಿರ್ಧಾರ ಮಾಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಉದ್ಯಾನವನಗಳನ್ನ ‘ಕೂಡಾ’ (KUDA) ಸಹಯೋಗದೊಂದಿಗೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
Follow us on Social media