ಮೈಸೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ನಾಡ ದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಚಾಲನೆ ನೀಡಿದರು.
ಸಿಎಂ ಯಡಿಯೂರಪ್ಪ ಅವರು ಇಂದು ಮಧ್ಯಾಹ್ನ 3.30ಕ್ಕೆ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಚಿನ್ನದ ಅಂಬಾರಿಯಲ್ಲಿ ಅಲಂಕೃತಗೊಂಡ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಕೊರೋನಾ ಸೋಂಕು ನಿಯಂತ್ರಣ ಕ್ರಮಗಳ ನಡುವೆ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆದಿದ್ದು, ಈ ಬಾರಿ ಜಂಬೂ ಸವಾರಿ ಅರಮನೆಗೆ ಮಾತ್ರ ಸೀಮಿತವಾಗಿದೆ. ಪ್ರತಿ ವರ್ಷ 5.5 ಕಿ.ಮೀ. ಸಾಗುತ್ತಿದ್ದ ಜಂಬೂ ಸಾವಾರಿ ಈ ಬಾರಿ ಕೇವಲ 400 ಮೀಟರ್ ಗೆ ಸೀಮಿತಗೊಳಿಸಲಾಗಿತ್ತು.
ಮೆರವಣಿಗೆಯಲ್ಲಿ ಮೈಸರು ಜಿಲ್ಲಾ ಪಂಚಾಯಿತಿ ಸಿದ್ಧಪಡಿಸಿದ್ದ ಕೊರೋನಾ ಜಾಗೃತಿ ಮೂಡಿಸುವ ಒಂದು ಸ್ತಬ್ಧಚಿತ್ರ ಮಾತ್ರ ಭಾಗವಹಿಸಿತ್ತು. ಉಳಿದಂತೆ ಅಶ್ವಾರೋಹಿ ದಳದ ಎರಡು ತುಕಡಿ, ಕರ್ನಾಟಕ ಪೊಲೀಸ್ ಬ್ಯಾಂಡ್ ನ ಆನೆಗಾಡಿ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿದ್ದವು.
Follow us on Social media