ಕಲಬುರಗಿ: ಮೂರ್ನಾಲ್ಕು ದಿನಗಳ ಬಳಿಕ ಅಂತರ್ ರಾಜ್ಯ ಬಸ್ ಸೇವೆಯನ್ನು ಪುನರ್ ಆರಂಭಿಸಲಾಗುವುದು ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಮಹಾರಾಷ್ಟ್ರ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಿಗೂ ಬಸ್ ಸಂಚಾರ ಆರಂಭಿಸಲು ಚಿಂತನೆ ನಡೆದಿದೆ. ಈಗಾಗಲೇ ಆಂಧ್ರಪ್ರದೇಶ, ತೆಲಂಗಾಣ , ಗೋವಾ ಮತ್ತಿತರ ರಾಜ್ಯಗಳಿಗೆ ಪತ್ರ ಬರೆಯಾಗಿದೆ, ಅಲ್ಲಿಂದ ಒಪ್ಪಿಗೆ ಬಂದರೆ ಸಂಚಾರ ಆರಂಭಿಸಲಾಗುವುದು ಎಂದು ತಿಳಿಸಿದರು.
ರಾಜ್ಯದೊಳಗೆ ಹವಾನಿಯಂತ್ರಿತ ಸ್ಲೀಪರ್ ಕೋಚ್ ಬಸ್ ಗಳ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ. ಹೊರ ರಾಜ್ಯ ಪ್ರವಾಸ ಮಾಡುವವರಿಂದ ಕೂಡಾ ಬೇಡಿಕೆ ಬರುತ್ತಿದೆ ಎಂದರು.
ಲಾಕ್ ಡೌನ್ ಕಾರಣ ಸಾರಿಗೆ ಇಲಾಖೆಗೆ 2,200 ಕೋಟಿ ನಷ್ಟ ಸಂಭವಿಸಿದೆ. ಇದನ್ನು ಸರಿದೂಗಿಸಲು ಬಸ್ ಪ್ರಯಾಣ ದರ ಏರಿಸುವುದಿಲ್ಲ, ಸಿಬ್ಬಂದಿ ಕಡಿತ, ರಜೆ ಮೇಲೆ ಕಳುಹಿಸುವ ಕ್ರಮ ಅನುಸರಿಸುವುದಿಲ್ಲ, ಬದಲಾಗಿ ಸೋರಿಕೆ ತಡೆ, ಕಾರ್ಯಕ್ಷಮತೆ ವೃದ್ಧಿ ಸೇರಿದಂತೆ ಇತರ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತೇವೆ ಎಂದು ಹೇಳಿದರು.
ಸದ್ಯಕ್ಕೆ 14 ಲಕ್ಷ ಪ್ರಯಾಣಿಕರು ಸರ್ಕಾರಿ ಬಸ್ ಗಳಲ್ಲಿ ಸಂಚರಿಸುತ್ತಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ 4 ಸಾವಿರ ಹೊಸ ಬಸ್ ಗಳನ್ನು ಖರೀದಿಸಿ ಸಾರಿಗೆ ನಿಗಮಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
Follow us on Social media