ಚಿಕ್ಕೋಡಿ: ಮುಂದಿನ 20 ವರ್ಷಗಳ ಕಾಲ ನಾನು ಶಾಸಕನಾಗಿ ಮುಂದುವರಿಯಬೇಕೆಂಬ ಆಸೆ ಇದ್ದು, ಮುಂದೆ ಒಂದು ದಿನ ಮುಖ್ಯಮಂತ್ರಿಯಾಗುವ ಪ್ರಸಂಗವೂ ದೂರ ಇಲ್ಲ. 20 ವರ್ಷದೊಳಗೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ
ಹುಕ್ಕೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಮೇಶ್ ಕತ್ತಿ ಇನ್ನೂ ಎರಡೂವರೆ ವರ್ಷ ಶಾಸಕ ಸ್ಥಾನ ಇದೆ. ಮುಂದೆಯೂ ಇದೇ ಕ್ಷೇತ್ರದಲ್ಲಿ ಶಾಸಕನಾಗಿ ಮುಂದುವರಿಯುತ್ತೇನೆ. ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಈ ಹಿಂದೆ ಮಂತ್ರಿಯಾಗಿದ್ದ ನಾನು ಮುಂದಿನ ಇಪ್ಪತ್ತು ವರ್ಷಗಳ ಕಾಲ ಶಾಸಕನಾಗಿ ಮುಂದುವರಿಯುವ ಆಸೆ ಇದೆ ಎಂದು ತನ್ನ ಆಸೆ ವ್ಯಕ್ತಪಡಿಸಿದರು.
ಬಿಎಸ್ ಯಡಿಯೂರಪ್ಪ ನಮ್ಮ ನಾಯಕರು ಅನ್ನೋದರಲ್ಲಿ ಎರಡು ಮಾತಿಲ್ಲ ಎಂದಿರುವ ಉಮೇಶ್ ಕತ್ತಿ, ಎಂತಹ ಸವಾಲು ಬಂದರೂ ಅದನ್ನು ನಿಭಾಯಿಸುವ ಶಕ್ತಿ ಈ ದೇಶದಲ್ಲಿ ಯಡಿಯೂರಪ್ಪನವರಿಗೆ ಮಾತ್ರ ಇದೆ ಎಂದು ಹೇಳಿದರು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಮಂತ್ರಿಗಿರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಉಮೇಶ್ ಕತ್ತಿ, ಇದೀಗ ಯಡಿಯೂರಪ್ಪ ಪರ ಮೃದು ಧೋರಣೆ ತಾಳಿರೋದು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
ಇನ್ನು ಇದೇ ವೇಳೆ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಕತ್ತಿ, ಮುಂದಿನ ಹತ್ತು ದಿನಗಳ ಒಳಗೆ ಸಂಪುಟ ವಿಸ್ತರಣೆ ನಡೆಯಲಿದೆ. ರಾಜ್ಯದಲ್ಲಿ 28 ಸಚಿವರಿದ್ದಾರೆ. ಇನ್ನೂ 6 ಮಂತ್ರಿ ಸ್ಥಾನ ಖಾಲಿ ಇದೆ. ಆ ಸ್ಥಾನಗಳಿಗೆ ಸಚಿವರನ್ನು ನೇಮಕ ಮಾಡೋದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು ಎಂದರು.
Follow us on Social media