ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ಗಲ್ಫ್ ಸಹಕಾರ ಸಮಿತಿ (ಜಿಸಿಸಿ) ರಾಷ್ಟ್ರಗಳಿಂದ ಹೂಡಿಕೆದಾರರ ನಿಯೋಗವೊಂದು ಮುಂದಿನ ತಿಂಗಳು ಬೆಂಗಳೂರಿಗೆ ಆಗಮಿಸಲಿದೆ ಎಂದು ಐಟಿ ಬಿಟಿ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಯುಎಇ, ಸೌದಿ ಅರಬೀಯಾ ಮತ್ತು ಒಮನ್ ನಂತಹ ಜಿಸಿಸಿ ರಾಷ್ಟ್ರಗಳ ಹೂಡಿಕೆದಾರರು ಬೆಂಗಳೂರು ಹೊರವಲಯದಲ್ಲಿ ವಿಶ್ವದರ್ಜೆ ಮಟ್ಟದ ಡಿಸೈನ್ ಡಿಸ್ಟ್ರಿಕ್ಟ್ ಸ್ಥಾಪನೆ ಸೇರಿದಂತೆ ಇನ್ನಿತರ ಪ್ರಮುಖ ಹೂಡಿಕೆ ಪ್ರಸ್ತಾಪಗಳಿಗೆ ಒಲವು ತೋರಿವೆ ಎಂದು ನಾಲ್ಕು ದಿನಗಳ ದುಬೈ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ನಂತರ ಡಾ. ಅಶ್ವತ್ಥ ನಾರಾಯಣ್ ಸುದ್ದಿಗಾರರಿಗೆ ತಿಳಿಸಿದರು.
1 ಸಾವಿರ ಕೋಟಿ ರೂ. ಉದ್ದೇಶಿತ ಡಿಸೈನ್ ಡಿಸ್ಟ್ರಿಕ್ಟ್ ಸುಮಾರು 100 ರಿಂದ 150 ಎಕರೆ ಪ್ರದೇಶದಲ್ಲಿ ಅಸ್ವಿತ್ವಕ್ಕೆ ಬರಲಿದೆ. ಇದರಲ್ಲಿ ಉದ್ಯಮರಂಗಕ್ಕೆ ಬೇಕಾಗುವ ಪ್ರತಿಯೊಂಗು ವಸ್ತುವನ್ನೂ ಜಾಗತಿಕ ಮಟ್ಟದಲ್ಲಿ ವಿನ್ಯಾಸಗೊಳಿಸಲಾಗುವುದು, ಇದು ಔದ್ಯಮಿಕ ವಿನ್ಯಾಸ, ಕಲೆ ಮತ್ತು ಫ್ಯಾಷನ್ ಸಂಸ್ಕೃತಿಗಳ ಸಂಗಮವಾಗಲಿದ್ದು, ಇಲ್ಲಿ ಬೆಂಗಳೂರು ಡಿಸೈನ್ ಫೆಸ್ಟಿವಲ್ ಹಮ್ಮಿಕೊಳ್ಳಲಾಗುವುದು, ಗಲ್ಫ್ ಇಸ್ಲಾಮಿಕ್ ಇನ್ವೇಸ್ಟ್ ಮೆಂಟ್ ಬೆಂಗಳೂರಿನಲ್ಲಿ ಕಚೇರಿ ತೆರೆಯಲು ಉದ್ದೇಶಿಸಿದೆ ಎಂದು ಅವರು ಮಾಹಿತಿ ನೀಡಿದರು.
ಕ್ರೆಸೆಂಟ್, ಇವೊಲ್ ವೆನ್ಸ್ ಗ್ರೂಫ್ ಸೇರಿದಂತೆ ಅನೇಕ ಹೂಡಿಕೆ ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಒಲವು ತೋರಿವೆ. ರಾಜ್ಯದಲ್ಲಿನ ಎರಡು ಮತ್ತು ಮೂರನೇ ಸ್ತರದ ನಗರಗಳಲ್ಲಿ ಆಸ್ಪತ್ರೆ ಸ್ಥಾಪಿಸಲು ಆಸ್ಟರ್ ಡಿಎಂ ಹೆಲ್ತ್ ಕೇರ್ ಆಸಕ್ತಿ ವ್ಯಕ್ತಪಡಿಸಿದೆ. ವಾಟರ್ ಥೀಮ್ ಪಾರ್ಕ್ ಮಾಡಲು ಡೆಕರ್ ಮತ್ತು ಹಲಬಿ ಆಸಕ್ತಿ ತೋರಿರುವುದಾಗಿ ಅಶ್ವತ್ಥ ನಾರಾಯಣ ತಿಳಿಸಿದರು.
Follow us on Social media