ಬೆಂಗಳೂರು: ದೇಶಾದ್ಯಂತ ಹಲವೆಡೆ ಅಧಿಕ ಪ್ರಮಾಣದ ಮಳೆಯಿಂದಾಗಿ ಬೆಳೆಗಳು ನಾಶವಾಗಿದೆ, ಈರುಳ್ಳಿ ಬೆಳೆಯು ಮಳೆಯಿಂದ ಹಾನಿಗೊಳಗಾಗಿದ್ದು ಮತ್ತೆ ಗ್ರಾಹಕರಿಗೆ ಹೊರೆಯಾಗಲಿದೆ.
ಮಳೆ, ಪ್ರವಾಹ, ಅಂತರರಾಜ್ಯ ಸಂಪರ್ಕ ಸಂವಹನ ಕೊರತೆ ಇದಕ್ಕೆ ಕಾರಣ ಎಂದು ದೂಷಿಸಲಾಗಿದೆ,ಲಾಕ್ ಡೌನ್ ಮುಗಿದ ನಂತರ ಹೆಚ್ಚು ಪೂರೈಕೆಯಾಗಿದ್ದ ಕಾರಣ ಹಬ್ಬದ ಸಮಯದಲ್ಲೂ ಈರುಳ್ಳಿ ಬೆಲೆ 10 ರು. ಇತ್ತು, ಆದರೆ ಈಗ ಬೆಲೆ ಹೆಚ್ಚಾಗಿದೆ ಎಂದು ಈರುಳ್ಳಿ ವ್ಯಾಪಾರಸ್ಥರು ತಿಳಿಸಿದ್ದಾರೆ.
ಸದ್ಯ ಗಾತ್ರದ ಆಧಾರದ ಮೇಲೆ ಈರುಳ್ಳಿ ಕೆಜಿಗೆ 20 ರಿಂದ 30 ರು ಇದೆ, ಶೀಘ್ರವೇ 40-50 ರೂ ಗೆ ಏರಿಕೆಯಾಗುವ ಸಾಧ್ಯತೆಯಿದೆ, ಕೆಲವು ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಈಗಾಗಲೇ 50 ರು ತಲುಪಿದೆ. ಮತ್ತು 80 ರೂ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಬ್ಬದ ಸಮದಲ್ಲಿ ಬೆಲೆ ಏರಿಕೆಯಾಗಿತ್ತು.
ಲಾಕ್ ಡೌನ್ ತೆರವಾದ ನಂತರ ಬೆಲೆ ಏರಿಕೆ ಮಾಡಿದರೇ ವ್ಯಾಪಾರ ಕಳೆದುಕೊಳ್ಳುವ ಭಯದಿಂದಾಗಿ ನಾವು ಬೆಲೆ ಏರಿಕೆ ಮಾಡಿರಲಿಲ್ಲ, ಆದರೆ ಈಗ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ ಎಂದು ಯಶವಂತ ಪುರ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಉದಯ್ ಶಂಕರ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಪ್ರವಾಹದಿಂದ ಈರುಳ್ಳಿ ಬೆಳೆಗೆ ಹಾನಿಯಾಗಿರುವ ಕಾರಣದಿಂದ ಪೂರೈಕೆ ಕಡಿಮೆಯಾಗಿದ್ದು ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಳೇಯ ಸ್ಟಾಕ್ ಮಹಾರಾಷ್ಟ್ರದಿಂದ ಬರುತ್ತಿದೆ ಆದರೆ ಅದು ದೀರ್ಘಕಾಲ ಇರುವುದಿಲ್ಲ, ಈ ಈರುಳ್ಳಿಯಲ್ಲಿ ಹೆಚ್ಚಿನ ತೇವಾಂಶ ಇರುವ ಕಾರಣ ಹೆಚ್ಚಿನ ಸಮಯ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಕಳೆದ ವರ್ಷ ಕೂಡ, ಗ್ರಾಹಕರು, ಮಾರಾಟಗಾರರು ಮತ್ತು ರೈತರು ಇದೇ ರೀತಿಯ ಸಮಸ್ಯೆ ಎದುರಿಸಿದ್ದರು. ಈರುಳ್ಳಿ ಗುಣಮಟ್ಟ ಕಡಿಮೆಯಿದ್ದು ಬೆಲೆಹೆಚ್ಚಾಗಿತ್ತು.
ಇನ್ನೂ ಹದಿನೈದು ದಿನದಲ್ಲಿ ಸರಿಯಾದ ಚಿತ್ರಣ ದೊರೆಯುತ್ತದೆ. ಉತ್ತರ ಕರ್ನಾಟಕದಲ್ಲೂ ಕೂಡ ಮಳೆ ಪ್ರವಾಹ ಉಂಟಾಗಿ ಈರುಳ್ಳಿ ಬೆಳೆ ಹಾಳಾಗಿದೆ. ಕರ್ನಾಟಕದಲ್ಲಿ ಹೊಸ ಈರುಳ್ಳಿ ಬೆಳೆ ಇಲ್ಲ, ಇದರ ಜೊತೆಗೆ ಮಹಾರಾಷ್ಟ್ರದಿಂದ ಬರುತ್ತಿರುವ ಈರುಳ್ಳಿ ಗುಣಮಟ್ಟ ತೀರಾ ಕಳಪೆಯಾಗಿದೆ ಎಂದು ಅವರು ಹೇಳಿದ್ದಾರೆ.
Follow us on Social media