ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾಷಣ ಬೆನ್ನಲ್ಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಕಳೆದ ಮೂರು ವಾರಗಳಲ್ಲಿ ಪೊಲೀಸ್ ಸಿಬ್ಬಂದಿಯ ಸೇವೆಗೆ ಸರ್ಕಾರ ಹಾಗೂ ಸಾರ್ವಜನಿರಿಂದ ಪ್ರಶಂಸೆ ಕೇಳಿಬಂದಿದೆ.
ಕಳೆದ ಮೂರು ವಾರಗಳಿಂದ ಸಾರ್ವಜನಿಕರು ಸಹಕಾರ ಕೊಟ್ಟಿದ್ದಾರೆ, ಹೀಗಾಗಿ ಮಾಧ್ಯಮದವರು, ತರಕಾರಿ ಮಾರಾಟ ಮಾಡುವವರು, ಪೌಲ್ಟ್ರಿ ಉತ್ಪನ್ನ ಮಾರಾಟ ಮಾಡುವವರಿಗೆ ಪೊಲೀಸ್ ಸಿಬ್ಬಂದಿ ಯಾವುದೇ ತೊಂದರೆ ಕೊಡಬಾರದು. ಎಪಿಎಂಸಿಗೆ ದೊಡ್ಡ ದೊಡ್ಡ ಟ್ರಕ್‌ಗಳಲ್ಲಿ ಅಗತ್ಯ ವಸ್ತುಗಳು ಬರುತ್ತಿವೆ, ಅವುಗಳಿಗೆ ತೊಂದರೆ ಕೊಡಬಾರದು, ಖಾಲಿ ಟ್ರಕ್‌ಗಳು ಹೋಗುವುದು, ಬರುವುದು ಮಾಡುತ್ತಿವೆ, ಅವುಗಳಿಗೂ ತೊಂದರೆ ಕೊಡಬಾರದು ಎಂದು ಸೂಚಿಸಿದ್ದಾರೆ.
ಗೂಡ್ಸ್ ವಾಹನಗಳಿಗೆ ಯಾವುದೆ ತೊಂದರೆ ಕೊಡಬಾರದು. ಎಪಿಎಂಸಿಗೆ ಬರುವ ಹಮಾಲಿಗಳಿಗೆ, ಕೂಲಿ ಕಾರ್ಮಿಕರಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಪೊಲೀಸ್ ಸಿಬ್ಬಂದಿಗೆ ನಿರ್ದೇಶಿಸಿದ್ದಾರೆ.
ಡಯಾಲಿಸಿಸ್, ಗರ್ಭಿಣಿ ಮಹಿಳೆಯರಿಗೆ, ಕಿಮೊಥೆರಪಿಗೆ ಹೋಗುವವರಿಗೆ ಪಾಸ್ ಇಲ್ಲದೆ ಇದ್ದರೂ ಅವಮಾನ ಮಾಡಬಾರದು. ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಬಾರದು. ಟ್ಯಾಂಕರ್ ನೀರು, ವಿದ್ಯುತ್, ಸರ್ಕಾರಿ ಸಿಬ್ಬಂದಿಗೆ ಅವಕಾಶ ಕೊಡಬೇಕು. ಪಾಸ್ ಚೆಕ್ ಮಾಡುತ್ತಿರಬೇಕು, ನಕಲಿ ಪಾಸ್, ಝೆರಾಕ್ಸ್ ಪಾಸ್‌ಗಳನ್ನು ಪತ್ತೆ ಮಾಡಬೇಕು.
ಪ್ರತಿದಿನ ಪ್ರತಿ ಪೊಲೀಸ್ ಸಿಬ್ಬಂದಿಗೆ 3 ಲೀಟರ್ ನೀರು, 4 ಕಿತ್ತಳೆ ಹಣ್ಣುಗಳನ್ನು ಸೇವಿಸಲು ಒದಗಿಸಬೇಕು. ಯಾವುದೇ ಸಮಸ್ಯೆ ಇದ್ದರೂ ಮಾನವೀಯತೆಯಿಂದ ಕೆಲಸ ಮಾಡಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತರು ಮೌಖಿಕವಾಗಿ ದೂರವಾಣಿ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ.
Follow us on Social media