ಸಿಡ್ನಿ : ಮಹಿಳೆಯರ ಟಿ20 ವಿಶ್ವಕಪ್ ಅಂತಿಮ ಘಟ್ಟ ತಲುಪಿದ್ದು, ಸಿಡ್ನಿಯಲ್ಲಿ ನಾಳೆ ಸೆಮಿಫೈನಲ್ಸ್ ಪಂದ್ಯಗಳು ನಡೆಯಲಿವೆ.
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದರೆ, ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಎದುರಾಗುತ್ತಿವೆ.
ಎ ಗುಂಪಿನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಅಜೇಯ ದಾಖಲೆ ಹೊಂದಿರುವ ಹರ್ಮನ್ ಪ್ರೀತ್ ಕೌರ್ ಬಳಗ 8 ಅಂಕಗಳೊಂದಿಗೆ ಅಗ್ರಸ್ಥಾನದೊಂದಿಗೆ ಉಪಾಂತ್ಯ ತಲುಪಿದರೆ, ಇಷ್ಟೇ ಪಂದ್ಯ ಗಳಿಂದ ಆಸ್ಟ್ರೇಲಿಯಾ 6 ಅಂಕ ಕಲೆಹಾಕಿ ನಾಲ್ಕರ ಘಟ್ಟ ಪ್ರವೇಶಿಸಿದೆ. ಅತ್ತ ಬಿ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ ತಂಡ ನಾಲ್ಕು ಪಂದ್ಯಗಳಲ್ಲಿ 7 ಅಂಕದೊಂದಿಗೆ ಮೊದಲ ಸ್ಥಾನದೊಂದಿಗೆ ಅಂತಿಮ ನಾಲ್ಕರ ಘಟ್ಟಕ್ಕೇರಿದರೆ, ಇಂಗ್ಲೆಂಡ್ 6 ಅಂಕಗಳೊಂದಿಗೆ ಉಪಾಂತ್ಯಕ್ಕೇರಿದೆ.