ಮಡಿಕೇರಿ: ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು -ಮಡಿಕೇರಿಯನ್ನು ಸಂಪರ್ಕಿಸುವ ಜೋಡುಪಾಲ ಬಳಿ ರಸ್ತೆ ಕುಸಿದಿದೆ.
ನೀರಿನ ರಭಸಕ್ಕೆ ರಸ್ತೆ ಬದಿ ಮಣ್ಣು ಕೊಚ್ಚಿಹೋಗುತ್ತಿದೆ. ತೋಡಿನ ನೀರು ಹೊಳೆಯಂತೆ ಹರಿಯುತ್ತಿದೆ. ಮಣ್ಣು ಮತ್ತಷ್ಟು ಕುಸಿದರೆ ರಸ್ತೆ ಸಂಪರ್ಕ ಕಡಿತವಾಗಲಿದೆ.
ಎರಡು ವರ್ಷದ ಹಿಂದೆ ಕುಸಿದ ಜಾಗದಲ್ಲಿ ಈಗಲೂ ಕುಸಿಯಲು ಆರಂಭಗೊಂಡಿದೆ. ರಸ್ತೆಯ ಅಡಿಯಲ್ಲಿ ನೀರು ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ನೀರಿನ ರಭಸಕ್ಕೆ ರಸ್ತೆಯ ಬದಿ ಮಣ್ಣುಗಳು ಕೊಚ್ಚಿಕೊಂಡು ಹೋಗಿದೆ.
ಭಾರೀ ಮಳೆಗೆ ಸೋಮವಾರಪೇಟೆಯ ಹಾಕತ್ತೂರು ಸೇತುವೆ ಕೊಚ್ಚಿಹೋಗಿದೆ. ನೀರಿನ ಸೆಳೆತಕ್ಕೆ ಸೇತುವೆ ಕುಸಿದು ಬಿದ್ದಿದ್ದು, ಬಿಳಿಗೇರಿ ಹಾಕತ್ತೂರು ಸಂಪರ್ಕ ಕಡಿತಗೊಂಡಿದೆ.
ಕೊಡಗಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು ಕಾವೇರಿ ನದಿಯ ಭೋರ್ಗರೆತವೂ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಸೇತುವೆಗಳು ಮುಳುಗಡೆಯಾಗಿವೆ. ಕೊಡಗಿನ ಗಡಿ ಭಾಗದಲ್ಲಿನ ಪ್ರಸಿದ್ಧವಾದ ಗೋಲ್ಡನ್ ಟೆಂಪಲ್ಗೆ ಹೋಗುವ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ.
ಈ ಭಾಗದಲ್ಲಿನ ಸೇತುವೆಯೂ ಮುಳುಗಡೆಯಾಗಿದೆ. ಇದರಿಂದ ಗೋಲ್ಡನ್ ಟೆಂಪಲ್ ಗೆ ಸಂಪರ್ಕ ಕಡಿತವಾಗಿದ್ದು ಅಲ್ಲದೆ ಹಲವು ಗ್ರಾಮಗಳ ಸಂಪರ್ಕವು ಸಂಪೂರ್ಣವಾಗಿ ಕಡಿತವಾಗಿದೆ.
Follow us on Social media