ಬೆಂಗಳೂರು: ನಟ ನಿಖಿಲ್ ದಂಪತಿ ಲಾಕ್‍ಡೌನ್ ಸಮಯವನ್ನು ಫುಲ್ ಎಂಜಾಯ್ ಮಾಡುತ್ತಿದ್ದಾರೆ. ತೋಟದ ಮನೆ ಸುತ್ತಾಟ ಸೇರಿದಂತೆ, ಒಟ್ಟಿಗೆ ಕಾಲ ಕಳೆಯುತ್ತಿದ್ದು, ಇದೀಗ ಪತ್ನಿಯ ಹುಟ್ಟುಹಬ್ಬವನ್ನು ನಿಖಿಲ್ ಕುಮಾರಸ್ವಾಮಿಯವರು ವಿಭಿನ್ನವಾಗಿ ಆಚರಿಸಿದ್ದಾರೆ.
ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣವೂ ಸ್ಥಗಿತಗೊಂಡಿದ್ದರಿಂದ ನಿಖಿಲ್ ಕುಮಾರಸ್ವಾಮಿ ಸಂಪೂರ್ಣ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ತೋಟದ ಮನೆ ಸುತ್ತಾಟ ಸೇರಿದಂತೆ ತಮ್ಮ ಸುತ್ತಲಿನ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ಕ್ವಾಲಿಟಿ ಟೈಮ್ ಕಳೆಯುತ್ತಿದ್ದಾರೆ. ಸುತ್ತಾಟದ ಫೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗಷ್ಟೇ ಮಳೆಯಲ್ಲಿ ನೀಲಿ ಬಣ್ಣದ ಛತ್ರಿ ಕೆಳಗೆ ಇಬ್ಬರೂ ನಿಂತಿರುವ ಫೋಟೋ ಹಂಚಿಕೊಂಡಿದ್ದರು. ಇದಕ್ಕೆ ಅವರ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ರೇವತಿಯವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ದಂಪತಿಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ತಾವಿಬ್ಬರೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೇಕ್ ಕತ್ತರಿಸುತ್ತಿರುವ ಸಂದರ್ಭದ ಫೋಟೋ ಹಾಕಿರುವ ಅವರು, ಹುಟ್ಟು ಹಬ್ಬದ ಶುಭಾಶಯ ಚಿನ್ನ ಎಂದು ಪ್ರೀತಿಯಿಂದ ಮೂಗು ಮುರಿಯುತ್ತಿರುವ ಎಮೋಜಿಯನ್ನು ಹಾಕಿದ್ದಾರೆ.
ಚಿತ್ರದಲ್ಲಿ ನಿಖಿಲ್ ಹಾಗೂ ರೇವತಿ ಇಬ್ಬರೂ ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡಿದ್ದು, ರೇವತಿಯವರು ಕೇಕ್ ಕತ್ತರಿಸುತ್ತಿರುವ ಫೋಟೋವನ್ನು ಹಾಕಲಾಗಿದೆ. ಪೋಸ್ಟ್‍ಗೆ ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ಹ್ಯಾಪಿ ಬರ್ಥ್ ಡೇ ಅತ್ತಿಗೆ, ಹ್ಯಾಪಿ ಬರ್ಥ್ ಡೇ ಮೇಡಂ ಎಂದು ಶುಭಾಶಯ ತಿಳಿಸುತ್ತಿದ್ದಾರೆ. ಸಾಕಷ್ಟು ಜನ ಕಮೆಂಟ್ ಮಾಡುವ ಮೂಲಕ ಹಾರೈಸುತ್ತಿದ್ದಾರೆ.
ಇತ್ತೀಚೆಗೆ ನಿಖಿಲ್ ತೋಟದ ಮನೆಯಲ್ಲಿ ಇಬ್ಬರು ಕಾಲ ಕಳೆದಿರುವ ಫೊಟೋವನ್ನು ಹಂಚಿಕೊಂಡಿದ್ದರು. ಹೀಗೆ ತಮ್ಮ ಸಿನಿಮಾಗಳ ಅಪ್‍ಡೇಟ್‍ಗಿಂತ ಹೆಚ್ಚಾಗಿ ತಮ್ಮ ಕುಟುಂಬ ಹಾಗೂ ಪತ್ನಿ ಜೊತೆಗೆ ಕಾಲ ಕಲೆದ ಕುರಿತು ಪೋಸ್ಟ್ ಹಾಕುತ್ತಿದ್ದಾರೆ.
ಲಾಕ್‍ಡೌನ್ ನಡುವೆಯೂ ಕುಮಾರಸ್ವಾಮಿ ಪುತ್ರ ನಿಖಿಲ್ ಏಪ್ರಿಲ್ 17ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್.ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ನಟ ನಿಖಿಲ್, ರೇವತಿ ಅವರ ಜೊತೆ ಸಪ್ತಪದಿ ತುಳಿದಿದ್ದರು. ಇಷ್ಟು ಮಾತ್ರವಲ್ಲದೆ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟ ಎದುರಿಸುತ್ತಿದ್ದ ಸಿನಿಮಾ ಕಾರ್ಮಿಕರಿಗೆ ನಿಖಿಲ್ ಸಹಾಯ ಮಾಡಿದ್ದು, ಬಡವರ ಖಾತೆಗೆ ಹಣ ಹಾಕುವ ಮೂಲಕ ನೆರವಾಗಿದ್ದಾರೆ. ಈಗಾಗಲೇ ಎರಡ್ಮೂರು ಚಿತ್ರಗಳಿಗೆ ನಿಖಿಲ್ ಸಹಿ ಹಾಕಿದ್ದು, ಇನ್ನೂ ಸೆಟ್ಟೇರಿಲ್ಲ. ಇನ್ನೇನು ಸಿನಿಮಾ ಕೆಲಸಗಳು ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಪತ್ನಿಯೊಂದಿಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ.
Follow us on Social media