ಮಂಡ್ಯ: ಮಂಡ್ಯ ಜಿಲ್ಲೆಯ ಜನರ ಜೀವನಾಡಿ ಮೈ ಶುಗರ್ ಸಕ್ಕರೆ ಕಾರ್ಖಾನೆ ಪುನಾರಂಭ ಕುರಿತು ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಶನಿವಾರ ಹೇಳಿದ್ದಾರೆ.
ಈಗಾಗಲೇ ಕಾರ್ಖಾನೆ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಗಿದೆ. ಮೊದಲ ಬಾಯ್ಲರ್ ಈಗಾಗಲೇ ಆರಂಭಗೊಂಡಿದ್ದು, ಎರಡನೇ ಬಾಯ್ಲರ್ ಗೆ ಇದೇ 19 ರಂದು ಚಾಲನೆ ನೀಡಲಾಗುವುದು. ಇದೇ 30 ರಿಂದ ರೈತರಿಂದ ಸಂಪೂರ್ಣ ಕಬ್ಬು ಖರೀದಿಸಿ ಅರೆಯುವ ಕೆಲಸ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಬ್ಬು ಖರೀದಿ ತಡವಾದ ಹಿನ್ನೆಲೆಯಲ್ಲಿ ಬೇರೆ ಕಾರ್ಖಾನೆಯವರು ಈಗಾಗಲೇ ಒಂದು ಲಕ್ಷ ಟನ್ ಕಬ್ಬು ಖರೀದಿ ಮಾಡಿದ್ದರೆ. ನಮ್ಮ ಕಾರ್ಖಾನೆಯಿಂದ ಶೇ. ನೂರರಷ್ಟು ಕಬ್ಬು ಖರೀದಿ ಮಾಡಲಾಗುವುದು. ಜಿಲ್ಲೆಯ ಎಲ್ಲ ತಾಲ್ಲೂಕಿನ ರೈತರ ಕಬ್ಬು ಖರೀದಿ ಮಾಡಲಾಗುವುದು ಎಂದು ಹೇಳಿದರು.
ಕಾರ್ಖಾನೆ ಆರಂಭ ಕುರಿತು ಮಾತುಕೊಟ್ಟಂತೆ ನಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸೆ.30 ರ ನಂತರ ಕಾರ್ಖಾನೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಗುವುದು. ಶಾಶ್ವತವಾಗಿ ಈ ಕಾರ್ಖಾನೆ ನಡೆಯಬೇಕೆನ್ನುವುದು ಸರ್ಕಾರದ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್, ಜಿಲ್ಲಾಧಿಕಾರಿ ಎಸ್.ಅಶ್ವತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Follow us on Social media