ಮಂಗಳೂರು: ನಕಲಿ ಇನ್ಸ್ಟಾಗ್ರಾಂ ಖಾತೆ ಮೂಲಕ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಗೂ ಕೊಲೆ ಬೆದರಿಕೆ ಹಾಕುತ್ತಿದ್ದ ಬೆಳ್ತಂಗಡಿ ಮೂಲದ ಯುವಕನೋರ್ವರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬೆಳ್ತಂಗಡಿಯ ಮುಹಮ್ಮದ್ ಅಝಲ್ (20) ಎಂದು ಗುರುತಿಸಲಾಗಿದೆ.
ಹೈಕೋರ್ಟ್ ತೀರ್ಪಿನ ನಂತರ ನಗರದ ರಥಬೀದಿ ಕಾಲೇಜಿನಲ್ಲಿ ಹಿಜಾಬ್ ಗಲಾಟೆ ಪ್ರಕರಣದಲ್ಲಿ ವಿದ್ಯಾರ್ಥಿ ಸಾಯಿ ಸಂದೇಶ್ ಎಂಬ ವಿದ್ಯಾರ್ಥಿಯ ಫೋಟೋದೊಂದಿಗೆ ‘ಮಂಗಳೂರಿನಲ್ಲಿ ಬೀಳಲಿದೆ ಮತ್ತೊಂದು ಹೆಣ’ ‘ಸಾಯಿ ಸಂದೇಶನ ಹೆಣ ಮಂಗಳೂರಿನ ಯಾವೂದಾದರೂ ಚರಂಡಿಯಲ್ಲಿ ಸಿಗುವುದು ಖಚಿತ’
ಸೇರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೋಮು ಗಲಭೆ ಸೃಷ್ಟಿಸುವ ಹುನ್ನಾರದಿಂದ ಈತ mari_gudi_5 ಎಂಬ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಕೋಮು ಸಂಬಂಧಿಸಿದ ಪೋಸ್ಟ್ ಮಾಡುತ್ತಿದ್ದ.
ಈ ಸಂಬಂಧ ಮಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಮಂಗಳವಾರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Follow us on Social media