ನವದೆಹಲಿ: ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ಸಿದ್ಧ ವಸ್ತುಗಳನ್ನು ಬಹಿಷ್ಕರಿಸಲು ಆಂದೋಲನವೊಂದು ಇದೀಗ ಆರಂಭಗೊಂಡಿದೆ. ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳನ್ನು ಬಹಿಷ್ಕರಿಸಲು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ನಿರ್ಧರಿಸಿದ್ದು, ಈಗಾಗಲೇ ಆಮದು ನಿಲ್ಲಿಸಲು 3000ವಸ್ತುಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಭಾರತೀಯರು ಚೀನಾದ ವಸ್ತುಗಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಇತ್ತೀಚೆಗೆ ಚೀನಾದ ಪತ್ರಿಯೊಂದು ವರದಿ ಮಾಡಿತ್ತು. ಇದರ ಬೆನ್ನಲ್ಲೇ ದೇಶದ ಸ್ವಾಭಿಮಾನವನ್ನು ಎತ್ತಿಹಿಡಿಯಲು ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಗಡಿಯಲ್ಲಿ ಚೀನಾದ ಉದ್ಧಟತನ ಹೆಚ್ಚುತ್ತಿರುವುದರಿಂದ ಮತ್ತು ಇತ್ತೀಚೆಗೆ ಪ್ರಧಾನಿ ಮೋದಿಯವರು ಸ್ವದೇಶಿ ವಸ್ತುಗಳನ್ನು ಬಳಸುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಸಿಎಐಟಿಯ ಈ ನಿರ್ಣಯ ಮಹತ್ವವನ್ನು ಪಡೆದುಕೊಂಡಿದೆ.
ಚೀನಾ ವಸ್ತುಗಳ ಮಾರಾಟವನ್ನು ನಿಲ್ಲಿಸಲು ಒಕ್ಕೂಟವು ಭಾರತದಲ್ಲಿ ಸುಲಭವಾಗಿ ಉತ್ಪಾದಿಸಲು ಸಾಧ್ಯವಿರುವ. ಆದರೆ, ಸದ್ಯ ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಂಡು ಮಾರುತ್ತಿರುವ ಸುಮಾರು 3000 ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಒಕ್ಕೂಟದಲ್ಲಿ ದೇಶದ 7 ಕೋಟಿ ವ್ಯಾಪಾರಿಗಳಿದ್ದು, 40 ಸಾವಿರ ವ್ಯಾಪಾರಿ ಸಂಘಗಳು ಸದಸ್ಯರಾಗಿವೆ. ಇವರೆಲ್ಲರೂ ಚೀನಿ ವಸ್ತುಗಳ ಮಾರಾಟ ನಿಲ್ಲಿಸಿದರೆ ಸ್ವದೇಶಿ ಆಂದೋಲನಕ್ಕೆ ದೊಡ್ಡ ಬೆಂಬಲ ಸಿಗಲಿದೆ.
ಈ ಕುರಿತು ವಿವರ ನೀಡಿದ ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, ನಮ್ಮ ಆಂದೋಲನಕ್ಕೆ ಭಾರತದ ವಸ್ತು ನಮ್ಮ ಹೆಮ್ಮೆ ಎಂದು ಹೆಸರಿಡಲಾಗಿದೆ. ಈ ಆಂದೋಲನದ ಮೂಲಕ ಡಿಸೆಂಬರ್ 2021ರ ವೇಳೆಗೆ ರೂ.1 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದನ್ನು ತಡೆಯುವ ಸಂಕಲ್ಪ ಮಾಡಿದ್ದೇವೆ. ಚೀನಾದಿಂದ ಸದ್ಯ ಸಿದ್ಧ ವಸ್ತುಗಳು, ಕಚ್ಚಾವಸ್ತುಗಳು, ಬಿಡಿ ಭಾಗಗಳು ಹಾಗೂ ತಾಂತ್ರಿಕ ಉತ್ಪನ್ನಗಳು ಹೀಗೆ ಮುಖ್ಯವಾಗಿ ನಾಲ್ಕು ವಿಧದ ಉತ್ಪನ್ನಗಳು ಭಾರತಕ್ಕೆ ಆಮದಾಗುತ್ತಿವೆ. ಮೊದಲ ಹಂತದಲ್ಲಿ ನಾವು ಸಿದ್ಧ ವಸ್ತುಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆಂದು ತಿಳಿಸಿದ್ದಾರೆ.
Follow us on Social media