ಕಲಬುರಗಿ: ಬೇಡಾ ಎಂದರೂ ಉಪ ಚುನಾವಣೆಗೆ ನಿಂತು ಹೆಚ್ ವಿಶ್ವನಾಥ್ ಸೋತರು ಎಂದು ಸಚಿವ ಬೈರತಿ ಬಸವರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಬುಧುವಾರ ನಗರದ ಪ್ರದಕ್ಷಿಣೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ವಿಶ್ವನಾಥ್ ಅವರಿಗೆ ಉಪ ಚುನಾವಣೆಗೆ ನಿಲ್ಲಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮನವಿ ಮಾಡಿದ್ದರು. ಆದರೆ, ಅವರ ಮಾತು ಕೇಳಿದೆ ಚುನಾವಣೆಯಲ್ಲಿ ನಿಂತು ವಿಶ್ವನಾಥ ಸೋತರು ಎಂದು ಬೇಸರ ವ್ಯಕ್ತಪಡಿಸಿದರು.
‘ಯಡಿಯೂರಪ್ಪನವರೇ ಖುದ್ದಾಗಿ ಚುನಾವಣೆಗೆ ನೀವು (ವಿಶ್ವನಾಥ) ನಿಲ್ಲುವುದು ಬೇಡ. ನಿಮ್ಮನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೂ, ವಿಶ್ವನಾಥ್ ಚುನಾವಣೆಗೆ ಸ್ಪರ್ಧಿಸಿದರು. ಅದೇ ಕಾರಣಕ್ಕೆ ಈಗ ವಿಧಾನ ಪರಿಷತ್ ಸ್ಥಾನವೂ ಸಿಗಲಿಲ್ಲ. ಆದರೆ ಈಗಲೂ ಕಾಲ ಮಿಂಚಿಲ್ಲ. ವಿಶ್ವನಾಥ್ ಅವರಿಗೆ ಸ್ಥಾನ-ಮಾನ ಸಿಗುವ ಭರವಸೆ ಇದೆ. ಅವರ ವಿಷಯದಲ್ಲಿ ಪಕ್ಷದ ಹೈಕಮಾಂಡ್ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತದೆ. ಎಂದು ಭೈರತಿ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ನೂತನ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡೋ ವಿಚಾರದ ಕುರಿತು ಪ್ರತಿಕ್ರಿಯಿಸಿದ ಭೈರತಿ, ಯಾರಿಗೆ ಸಚಿವ ಸ್ಥಾನ ಕೊಡಬೇಕೆನ್ನೋದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ. ಅವರು ಯಾರಿಗೆ ಸಚಿವ ಸ್ಥಾನ ಕೊಟ್ಟರೂ ನಾವೆಲ್ಲಾ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದರು.
ಅಂತೆಯೇ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಜಾರಿ ವಿಷಯವಾಗಿ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ. ನಾಳೆ (ಗುರುವಾರ) ಸಚಿವ ಸಂಪುಟ ಸಭೆಯಲ್ಲಿ ನಡೆಯಲಿದ್ದು, ಸಭೆಯಲ್ಲಿ ಚರ್ಚಿಸಿ ಲಾಕ್ ಡೌನ್ ಬಗ್ಗೆ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.
Follow us on Social media