ಬೆಳ್ತಂಗಡಿ : ಮದುವೆಯಾಗಲು ಮನೆ ಬಿಟ್ಟು ಬರಲು ಒಪ್ಪದ ಪ್ರೇಯಸಿಯ ಮನೆಗೆ ನುಗ್ಗಿದ ಯುವಕನೋರ್ವ ಸಿಟ್ಟಿಗೆದ್ದು ಆಕೆಗೆ ಚೂರಿ ಇರಿದ ಘಟನೆ ಇಲ್ಲಿನ ಲಾಯಿಲ ಸಮೀಪ ಏ.6ರ ಮಂಗಳವಾರ ರಾತ್ರಿ ನಡೆದಿದೆ.
ಪುಂಜಾಲಕಟ್ಟೆಯ ನಿವಾಸಿ ಶಮೀರ್ (22) ಎಂಬಾತ ಚೂರಿ ಇರಿದ ಯುವಕ. ಈತ ತನ್ನದೇ ಸಮುದಾಯದ ಲಾಯಿಲ ಗ್ರಾಮದ ನಿವಾಸಿ 21 ವರ್ಷದ ಯುವತಿಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು ಮದುವೆಯಾಗಲು ಮನೆಬಿಟ್ಟು ಬರಲು ಒತ್ತಾಯಿಸುತ್ತಿದ್ದ. ಆದರೆ ಯುವತಿ ಅದನ್ನು ತಿರಸ್ಕರಿಸಿದ್ದರಿಂದ ಕೋಪಗೊಂಡ ಪ್ರೇಮಿ ಮಂಗಳವಾರ ರಾತ್ರಿ 10.20ಕ್ಕೆ ಯುವತಿ ಮನೆಗೆ ನುಗ್ಗಿ ಆಕೆಗೆ ಚೂರಿ ಇರಿದಿದ್ದಾನೆ.
ಯುವತಿಯ ಎಡಕೈ, ಬಲಕೈ , ಮತ್ತು ಕುತ್ತಿಗೆಗೆ ಗಾಯವಾಗಿದೆ. ತತ್ ಕ್ಷಣ ಮನೆಮಂದಿ ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.ಯುವತಿಯನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ತಂಗಡಿ ಠಾಣೆಯಲ್ಲಿ ಕಲಂ 448,324,354,504,506 ಐಪಿಸಿಯಡಿ ಪ್ರಕರಣ ದಾಖಲಾಗಿದೆ.
Follow us on Social media