Breaking News

ಬೆಲೆ ಏರಿಕೆ ಕುರಿತು ಬಿಸಿ ಬಿಸಿ ಚರ್ಚೆ: ಮಸಾಲೆ ದೋಸೆ ಒಂದಕ್ಕೆ 100 ರೂ.! ಇದಕ್ಕೆ ಏನ್ ಹೇಳ್ತೀರಿ?

ಬೆಂಗಳೂರು: ವಿಧಾನಸಭಾ ಕಲಾಪದ ಮೂರನೆಯ ದಿನ ಸದನದಲ್ಲಿ ಬೆಲೆ ಏರಿಕೆ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದ್ದು, ಒಂದು ಮಸಾಲೆ ದೋಸೆಗೆ ನೂರು ರೂಪಾಯಿ ಆಗಿದೆ. ಇದಕ್ಕೆ ಏನ್ ಹೇಳ್ತೀರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಡಳಿತ ಪಕ್ಷದ ಸದಸ್ಯರನ್ನು ಪ್ರಶ್ನಿಸಿದರು.

ಜನವರಿಯಲ್ಲಿ 15 ರೂ. ಇದ್ದ ಕಾಫಿ ಇಂದು 30 ರೂ. ಆಗಿದೆ. ಪ್ರತಿಯೊಂದು ಅಗತ್ಯ ವಸ್ತುವಿನ ಬೆಲೆ ಹೆಚ್ಚಿದೆ. ಇದಕ್ಕೆ ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆಯೂ ಕಾರಣ. ಹೀಗಾಗಿ ರಾಜ್ಯ ಸರ್ಕಾರ ಇಂಧನ ಬೆಲೆಯನ್ನು ಕಡಿತಗೊಳಿಸಬೇಕು. ಈ ವಿಚಾರದಲ್ಲಿ ತಮಿಳುನಾಡು ಸರ್ಕಾರದ ನಿರ್ಧಾರವನ್ನು ಅನುಸರಿಸಬೇಕು ಎಂದರು.

ಆದರೆ, ಇಂಧನ ಬೆಲೆ ಏರಿಕೆಯೇ ಬೇರೆಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ದನಿಯೇರಿಸಿದರು.

ಅಡುಗೆ ಅನಿಲ ಸಬ್ಸಿಡಿ ನಿಲ್ಲಿಸಿದ್ದೇಕೆ?
ಕೇಂದ್ರ ಸರ್ಕಾರವು ಅಡುಗೆ ಅನಿಲ ಖರೀದಿಗೆ ನೀಡುತ್ತಿದ್ದ ಸಬ್ಸಿಡಿಯನ್ನು 2020ರಲ್ಲಿ ನಿಲ್ಲಿಸಿದ್ದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ “ಸೌದೆ ಒಲೆಯೂದುವ ಅಕ್ಕ ತಂಗಿಯರ ಕಣ್ಣುರಿ, ಎದೆನೋವು ನಿಲ್ಲಿಸಲು ಸಬ್ಸಿಡಿ ಸಹಿತ ಅಡುಗೆ ಅನಿಲ ನೀಡುತ್ತೇವೆ” ಎಂದು ಹೇಳಿದ್ದರು. ಆದರೆ ಈಗೇನಾಗಿದೆ? ಉಜ್ವಲ ಯೋಜನೆಯಡಿ 28 ಕೋಟಿ ಗ್ರಾಹಕರು ದೇಶಾದ್ಯಂತ ಇದ್ದಾರೆ. ಅಡುಗೆ ಅನಿಲ ದರ ಹೆಚ್ಚಳ ಮತ್ತು ಸಬ್ಸಿಡಿ ನಿಲ್ಲಿಸಿದ್ದರಿಂದ ಈ ಗ್ರಾಹಕರಿಗೆ ತೊಂದರೆಯಾಗುತ್ತಿಲ್ಲವೇ ಎಂದರು.

ದೇಶದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಹಾಗೂ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಈ ಕುರಿತು ವಿಧಾನಸಭೆಯಲ್ಲಿಂದು ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವೆ ಬಿಸಿ ಬಿಸಿ ಚರ್ಚೆಯಾಯಿತು.

ಮಧ್ಯಮ, ಕೆಳ ಮಧ್ಯಮ ವರ್ಗದ ಜನರು ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದ್ದ ಬೆಲೆ ಏರಿಕೆ ವಿಚಾರವನ್ನು ಮಧ್ಯಾಹ್ನವೂ ಮುಂದುವರಿಸಿದ ಸಿದ್ದರಾಮಯ್ಯ, ಅಕ್ಕಿ, ಬೇಳೆ, ಸಿಮೆಂಟ್, ಕಬ್ಬಿಣ, ಅಡುಗೆ ಅನಿಲ, ಅಡುಗೆ ಎಣ್ಣೆ, ಔಷಧಿ, ಸಾಗಾಣಿಕೆ ವೆಚ್ಚ. ಹೀಗೆ ಪ್ರತಿಯೊಂದರ ಬೆಲೆ ಗಗನಕ್ಕೇರಿದೆ ಎಂದರು.

ಈ ವೇಳೆ ರಾಜ್ಯಸಭೆ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಅವರು ಈ ಹಿಂದೆ ನೀಡಿದ್ದ ರಾವಣನ ಲಂಕಾದಲ್ಲಿ ಪೆಟ್ರೋಲ್ ದರ ಲೀಟರ್ ಗೆ 51 ರೂ., ಸೀತಾ ದೇಶ ನೇಪಾಳದಲ್ಲಿ 53 ರೂ. ಗಳಿದ್ದರೆ ಶ್ರೀರಾಮ ರಾಜ್ಯವಾದ ಭಾರತದಲ್ಲೇಕೆ 93 ರೂ. ಎಂಬ ಹೇಳಿಕೆಯನ್ನು ಉಲ್ಲೇಖಿಸಿದಾಗ, ಆಡಳಿತ ಪಕ್ಷದ ಸದಸ್ಯರು ಗರಂ ಆದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸುಬ್ರಹ್ಮಣ್ಯ ಸ್ವಾಮಿಯವರದ್ದು ವೈಯಕ್ತಿಕ ಅಭಿಪ್ರಾಯ. ಅವರು ಯಾವ ಪಕ್ಷದಲ್ಲೇ ಇದ್ದರೂ ತಮ್ಮ ಸ್ವಭಾವ ಬಿಡುವುದಿಲ್ಲ. ಪ್ರತಿಯೊಂದನ್ನೂ ವಿಶ್ಲೇಷಿಸುತ್ತಾರೆ. ಪ್ರಜಾಪ್ರಭುತ್ಚದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದರು.

ಪೆಟ್ರೋಲ್ ಕಡಿಮೆ ಇರುವ ದೇಶಗಳಲ್ಲಿ ಸೀಮೆಎಣ್ಣೆಯನ್ನು ಹೆಚ್ಚಾಗಿ ಬಳಸುತ್ತಾರೆ. ಆದರೆ ನ್ಯೂಜಿಲ್ಯಾಂಡ್ ನಂತಹ ದೇಶದಲ್ಲಿ ಪೆಟ್ರೋಲ್ ಲೀಟರ್ ಗೆ 125 ರೂ. ಇದೆ ಎಂದು ಸಚಿವ ಡಾ. ಸುಧಾಕರ್ ಸಮಜಾಯಿಷಿ ನೀಡಿದರು.

ಇದಕ್ಕೂ ಮುನ್ನ, ಪೆಟ್ರೋಲ್, ಡೀಸಲ್ ಬೆಲೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಗಿಂತ ಇಂದಿನ ಎನ್ ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ದುಪ್ಪಟ್ಟಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×