ಬೆಂಗಳೂರು : ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಮೊಬೈಲ್ ಕ್ಲಿನಿಕ್ ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದು ಬೆಂಗಳೂರಿನಲ್ಲಿ ಚಾಲನೆ ನೀಡಿದರು.
ಹಳೆಯ ಕೆಎಸ್ ಆರ್ ಟಿಸಿ ಬಸ್ ಗಳನ್ನು ಸುಸಜ್ಜಿತ ರೀತಿಯಲ್ಲಿ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಲಾಗಿದೆ.ಬಸ್ಸಿನ ಒಳಗಡೆ ಮಾದರಿ ಪರೀಕ್ಷೆ ಹಾಗೂ ಸಮಾಲೋಚನಾ ವೈದ್ಯರ ಸೌಕರ್ಯವನ್ನು ಕಲ್ಪಿಸಲಾಗಿದೆ.ಒಂದು ಹಾಸಿಗೆ ಹಾಗೂ ಕೈ ತೊಳೆದುಕೊಳ್ಳುವುದಕ್ಕೆ ನೀರಿನ ವ್ಯವಸ್ಥೆ ಮಾಡಲಾಗಿದೆ.
ಮೊಬೈಲ್ ಕ್ಲಿನಿಕ್ ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಇತರ ಜಿಲ್ಲೆಗಳಲ್ಲಿಯೂ ಮೊಬೈಲ್ ಕ್ಲಿನಿಕ್ ಸೌಕರ್ಯ ಲಭ್ಯವಿರುವುದಾಗಿ ತಿಳಿಸಿದರು.
ಐದು ಮೊಬೈಲ್ ಬಸ್ ಗಳು ಮಾದರಿ ಸಂಗ್ರಹಿಸುವ ಕೆಲಸ ನಿರ್ವಹಿಸಲಿವೆ. ಪೊಲೀಸರು ಹಾಗೂ ಅಪಾರ್ಟ್ ಮೆಂಟ್ ಜನರಿಗೂ ಪರೀಕ್ಷೆ ಮಾಡಲಾಗುವುದು ಎಂದು ತೇಜಸ್ವಿ ಸೂರ್ಯ ತಿಳಿಸಿದರು.
ಸಾರಿಗೆ ಸಚಿವರು ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಕಂದಾಯ ಸಚಿವ ಆರ್. ಅಶೋಕ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತಿತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow us on Social media