ಬೆಂಗಳೂರು: ಪ್ರಿಯಕರನೊಂದಿಗೆ ಶಾಮೀಲಾಗಿ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ರೂಪಿಸಿದ್ದ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
22 ವರ್ಷದ ಹರೀಶ್ ಎಂಬುವರನ್ನು ಕೊಲೆ ಮಾಡಲಾಗಿದೆ. ಪತ್ನಿ ಕೃಪಾ, ಆಕೆಯ ಪ್ರಿಯಕರ ಅಭಿಷೇಕ್ (23) ಹಾಗೂ ಆತನ ಸ್ನೇಹಿತ ಮೊಹಮ್ಮದ್ ರಫೀಕ್ (26)ಬಂಧಿತ ಆರೋಪಿಗಳು.
ಜು.11ರಂದು ತನ್ನ ಪತಿ ಹರೀಶ್(22) ಕಾಣೆಯಾಗಿದ್ದಾನೆ ಎಂದು ಪತ್ನಿ ಕೃಪಾ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಜು.15ರಂದು ರಾಜಕಾಲುವೆ ಬಳಿ ಅಪರಿಚಿತ ಶವವೊಂದು ಬಿದ್ದಿರುವ ಕುರಿತು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.
ಪ್ರಕರಣದ ಜಾಡು ಹಿಡಿದ ಪೊಲೀಸರು ಮೃತ ದೇಹದ ಮೇಲಿನ ಬಟ್ಟೆ ಹಾಗೂ ಗುರುತು ಪರಿಶೀಲಿಸಿದಾಗ ಇದು ಕಾಣೆಯಾದ ಹರೀಶ್ ನ ಶವ ಎಂಬುದು ಖಾತರಿಯಾಗಿತ್ತು.
ಆರೋಪಿ ಕೃಪಾ ತನ್ನ ಪ್ರಿಯಕರ ಅಭಿಷೇಕ್ ಜೊತೆ ಸೇರಿಕೊಂಡು ಪತಿಯ ಕೊಲೆಗೆ ಸಂಚು ರೂಪಿಸಿ, ಜು.9ರಂದು ರಾತ್ರಿ ಸುಮಾರು 1 ಗಂಟೆಗೆ ಮಲಗಿದ್ದ ಹರೀಶ್ ನ ತಲೆಮೇಲೆ ಕಲ್ಲು ಎತ್ತಿ ಹಾಕಿದ್ದು, ನಂತರ ಅಭಿಷೇಕ್ ನ ಗೆಳೆಯ ಮೊಹಮ್ಮದ್ ರಫಿಕ್, ಹರೀಶ್ ನ ಹೊಟ್ಟೆಗೆ 7 ಕಡೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದನು. ನಂತರ ಶವವನ್ನು ಮನೆಯ ಸಮೀಪದ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದರು. ಬಳಿಕ ಕೃಪಾಳ ಮೂಲಕ ಪೊಲೀಸ್ ಠಾಣೆಯಲ್ಲಿ ಹರೀಶ್ ಕಾಣೆಯಾದ ದೂರು ದಾಖಲಿಸಿ, ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ರೂಪಿಸಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Follow us on Social media