ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿ ವೇಳೆಯಲ್ಲಿ ಕಳಪೆ ಕಾಮಗಾರಿ ಕಾರಣಕ್ಕೆ ಮೂವರು ಬಿಬಿಎಂಪಿ ಇಂಜಿನಿಯರ್ ಗಳ ವಿರುದ್ಧ ಷೋಕಾಸ್ ನೋಟಿಸ್ ಹೊರಡಿಸಿದ ನಂತರ ಗುತ್ತಿಗೆದಾರ ರಮೇಶ್ ಗೆ 3 ಲಕ್ಷ ರೂಪಾಯಿ ದಂಡ ವಿಧಿಸಿರುವುದಾಗಿ ಪಾಲಿಕೆ ಹೇಳಿದೆ.
ನಾಗರಭಾವಿಯ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಹೆಬ್ಬಾಳ ಬಳಿಯ ಮರಿಯಪ್ಪನಪಾಳ್ಯ, ಹೆಚ್ ಎಂಟಿ ಲೇಔಟ್ ನಲ್ಲಿ ಬಿಬಿಎಂಪಿಯಿಂದ ಟಾರ್ ಹಾಕಿದ ಒಂದೆರಡು ದಿನಗಳಲ್ಲಿಯೇ ಕಿತ್ತು ಬಂದಿತ್ತು. ಈ ಬಗ್ಗೆ ಮಾಧ್ಯಮಗಳ ಬಂದ ವರದಿ ಆಧರಿಸಿ ಬಿಬಿಎಂಸಿ ಮೂವರು ಇಂಜಿನಿಯರ್ ಗಳಿಗೆ ನೋಟಿಸ್ ನೀಡಲಾಗಿತ್ತು.
9 ಕಿಲೋ ಮೀಟರ್ ರಸ್ತೆ ಮಾಡಲು 11. 50 ಕೋಟಿ ರೂಪಾಯಿ ವೆಚ್ಚ ಮಾಡಿರುವುದಾಗಿ ಬಿಬಿಎಂಪಿ ಹೇಳಿದೆ. ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ಕಡಗಳನ್ನು ಪರಿಶೀಲಿಸುವಂತೆ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೇಳಿರುವುದಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ.
ಕಳಪೆ ಕಾಮಗಾರಿ ಸಂಬಂಧ ಮಾಧ್ಯಮಗಳಲ್ಲಿ ವರದಿ ಬಂದ ನಂತರ ಆರ್ ಆರ್ ನಗರ ಉಪ ವಿಭಾಗದ ಮುಖ್ಯ ಎಂಜಿನಿಯರ್ ಎಂಟಿ ಬಾಲಾಜಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹೆಚ್ ಜೆ ರವಿ ಮತ್ತು ಐಕೆ ವಿಶ್ವಾಸ ವಿರುದ್ಧ ಚೀಫ್ ಎಂಜಿನಿಯರ್ ಪ್ರಹ್ಲಾದ್ ಅವರು ಷೋಕಾಸ್ ನೋಟಿಸ್ ಕಳುಹಿಸಿದ್ದಾರೆ.
ಇದೀಗ ಮತ್ತಷ್ಟು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಗುತ್ತಿಗೆದಾರ ರಮೇಶ್ ಗೆ ದಂಡವನ್ನು ಪಾಲಿಕೆ ವಿಧಿಸಿದೆ. ರಸ್ತೆ ಕಾಮಗಾರಿಯಿಂದಾಗಿ ನಮ್ಮ ವರ್ಚಸ್ಸಿಗೆ ಧಕ್ಕೆಯಾಗಿದೆ. ಆದಾಗ್ಯೂ, ಗುತ್ತಿಗೆದಾರನಿಗೆ ದಂಡ ವಿಧಿಸಲಾಗಿದೆ ಎಂಂದು ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಗೆ ಆದೇಶದ ನಂತರ ಬಿಬಿಎಂಪಿಯಿಂದ ಕಳಪೆ ಕಾಮಗಾರಿ ರಾಷ್ಟ್ರಮಟ್ಟದ ಸುದ್ದಿಯಾಗಿದ್ದು, ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
Follow us on Social media