ಬೆಂಗಳೂರು : ಪ್ರತಿಭಟನೆ ಮಾಡಿದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರನ್ನು ಬಂಧಿಸುವ ಮೂಲಕ ಬಿಜೆಪಿಯವರು ತುರ್ತು ಪರಿಸ್ಥಿತಿಗಿಂತಲೂ ದೊಡ್ಡ ವಿಚಾರ ಮಾಡುತ್ತಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಅದನ್ನು ಸಂವಿಧಾನವೇ ನಮಗೆ ನೀಡಿದೆ. ಆದರೆ ನಮ್ಮವರನ್ನು ಬಂಧಿಸುವ ಮೂಲಕ ಆ ಹಕ್ಕನ್ನು ಬಿಜೆಪಿ ಕಸಿದುಕೊಂಡಿದೆ. ನಮ್ಮ ನಾಯಕರು ಯಾವುದೇ ತಪ್ಪನ್ನೂ ಎಸಗಿಲ್ಲ ಎಂದರು.
ನನ್ನನ್ನು ಜಾರಿ ನಿರ್ದೇಶನಾಲಯ ಕಚೇರಿಗೆ ಕರೆದೊಯ್ದ ವೇಳೆ ನ್ಯಾಶನಲ್ ಕಾಲೇಜಿನಿಂದ ಫ್ರೀಡಂ ಪಾರ್ಕ್‌ವರೆಗೂ ರ್‍ಯಾಲಿ ಮಾಡಲಾಯಿತು. ಆದರೆ ಯಾರಾದರೂ ಗಲಾಟೆ ನಡೆಸಿದ್ದಾರಾ? ಅಂತೆಯೇ ಇಲ್ಲೂ ಕೂಡಾ. ನಮ್ಮ ನಾಯಕರ ವಿರುದ್ದ ನಡೆಯುತ್ತಿರುವ ಕುತಂತ್ರದ ಬಗ್ಗೆ ದೇಶಾದ್ಯಂತ ಕಾರ್ಯಕರ್ತರು ತಮ್ಮ ನೋವು ತೋಡಿಕೊಂಡಿದ್ದಾರೆ. ಆದರೆ ಬಿಜೆಪಿಯವರು ಅವರನ್ನು ಬಂಧಿಸಿ ಹತ್ತಿಕ್ಕುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಅವರು ತಮ್ಮ ಮನೆಯಿಂದ ಹೊರ ಬರುವ ಮೊದಲೇ ಬಂಧನಕ್ಕೆ ಮುಂದಾಗಿದ್ದರು. ಪ್ರತಿಭಟನೆಗೆ ಹೋಗಲೇಬಾರದು ಎಂದು ತಡೆಯುವುದು ತಪ್ಪಲ್ಲವೇ? ಎಐಸಿಸಿ ಕಚೇರಿಗೆ ಹೋದ ಎಚ್.ಕೆ. ಪಾಟೀಲ್, ಡಿ.ಕೆ. ಸುರೇಶ್, ದಿನೇಶ್ ಗುಂಡೂರಾವ್ ಅವರನ್ನೂ ಬಂಧಿಸಿ ಅನ್ಯಾಯ ಎಸಗಿದ್ದಾರೆ. ನಮ್ಮ ಕಚೇರಿಗೆ ನಮ್ಮ ನಾಯಕರೇ ಹೋಗುವಾಗ ಬಂಧನಕ್ಕೆ ಒಳಪಡಿಸುತ್ತಾರೆಂದರೆ ಇದು ನೀಚ ರಾಜಕಾರಣವಲ್ಲವೇ ಎಂದು ಡಿಕೆಶಿ ಪ್ರಶ್ನಿಸಿದರು.
Follow us on Social media