ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿ ಸಂದರ್ಭದಲ್ಲಿ ಆರು ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿದ ರಸ್ತೆ ಮೂರೇ ದಿನದಲ್ಲಿ ಕಿತ್ತು ಹೋಗಿದ್ದು, ಇದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ಪ್ರಧಾನಿ ಕಚೇರಿ ಸ್ಪಷ್ಟನೆ ಕೇಳಿದೆ.
- ಬೆಂಗಳೂರು ಭೇಟಿ ಸಂದರ್ಭದಲ್ಲಿ ಬೊಮ್ಮಾಯಿ ಅವರನ್ನು ‘ಜನಪ್ರಿಯ ಮುಖ್ಯಮಂತ್ರಿ’ ಎಂದು ಪ್ರಶಂಸಿದ್ದ ಪ್ರಧಾನಿ ಮೋದಿಯವರ ಕಚೇರಿಯಿಂದ ಕಳಪೆ ಕಾಮಗಾರಿಗಾಗಿ ಈಗ ಸ್ಪಷ್ಟನೆ ಕೇಳಿರುವುದು ಕಾಮನ್ ಮ್ಯಾನ್ ಸಿಎಂ ಖ್ಯಾತಿಗೆ ಕಳಂಕ ತಂದಂತಿದೆ.ಇನ್ನು ಬೆಂಗಳೂರು ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದು ವಾಹನ ಸವಾರರಿಗೆ ನರಕ ದರ್ಶನ ಮಾಡುತ್ತಿದ್ದರೂ ಸರ್ಕಾರ ಸ್ಪಂದಿಸಿರಲಿಲ್ಲ. ಆದರೆ 33 ಸಾವಿರ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಶಂಕು ಸ್ಥಾಪನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಬೇಸ್ ಕ್ಯಾಂಪ್ ಉದ್ಘಾಟನೆಗೆ ಬಂದ ಪ್ರಧಾನಿ ಮೋದಿ ಸಂಚಾರ ಮಾಡುವ ರಸ್ತೆಯ ಗುಂಡಿ ಮುಚ್ಚುವುದಕ್ಕೆ ಬಿಬಿಎಂಪಿ ಸಿದ್ಧತೆ ನಡೆಸಿತ್ತು.ಈ ಪೈಕಿ ಬೇಸ್ ಕ್ಯಾಂಪಸ್ ಬಳಿ ಆರು ಕೋಟಿ ರೂ. ಖರ್ಚು ಮಾಡಿ ರಸ್ತೆ ದುರಸ್ತಿ ಮಾಡಲಾಗಿದ್ದು ಮೂರೇ ದಿನದಲ್ಲಿ ಅದು ಹಾಳಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.