ಬೆಂಗಳೂರು: ನಾನೊಬ್ಬ ಯುವ ವಿಜ್ಞಾನಿ, ನಾನು ಡ್ರೋನ್ ತಯಾರಿಸಿದ್ದೇನೆ ಎಂದು ಹೇಳಿಕೊಂಡು ವ್ಯಾಪಕ ಸುದ್ದಿಗೆ ಗ್ರಾಸವಾಗಿ ವಿವಾದದ ಬಳಿಕ ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ.
ಹೌದು.. ಪೊಲೀಸರ ವಿಚಾರಣೆಯನ್ನೂ ಎದುರಿಸಿ ಕಣ್ಮರೆಯಾಗಿದ್ದ ಡ್ರೋನ್ ಪ್ರತಾಪ್, ಎರಡು ವರ್ಷಗಳ ಬಳಿಕ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರತ್ಯಕ್ಷರಾಗಿರುವ ಪ್ರತಾಪ್, ಈ ಬಾರಿ ಹೊಸದಾಗಿ ಏನೋ ಪ್ರಾರಂಭಿಸುತ್ತಿರುವಂತೆ ಮುನ್ಸೂಚನೆ ನೀಡಿದ್ದಾರೆ. ಟೇಬಲ್ ಮೇಲೊಂದು ಲ್ಯಾಪ್ಲಾಪ್ ಇಟ್ಟು, ಅದಕ್ಕೆ ಡಾಟಾ ಕೇಬಲ್ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡು, ಎರಡು ಕೈಗಳಿಗೆ ಹಳದಿ ಬಣ್ಣದ ರಕ್ಷಾ ಕವಚ ಹಾಗೂ ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಸಾಲ್ಡರಿಂಗ್ ಗೇರ್ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಟೇಬಲ್ ಮೇಲೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳಿದ್ದು, ಟೇಬಲ್ನ ಒಂದು ಬದಿಯಲ್ಲಿ ಡ್ರೋನ್ ಕ್ಯಾಮೆರಾದ ಅರ್ಧ ಚಿತ್ರ ಕಾಣುತ್ತದೆ. ಈ ಬಾರಿ ಡ್ರೋನ್ ಪ್ರತಾಪ್ ಯಾವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ತಿಳಿಸಿಲ್ಲ. ಆದರೆ, ‘ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ’ ಎಂಬ ಅಡಿಬರಹ ನೀಡಿದ್ದಾರೆ. ಸದ್ಯ ಪ್ರತಾಪ್ ಅವರ ಹೊಸ ಅವತಾರ ವೈರಲ್ ಆಗಿದ್ದು, ಫೋಟೋ ನೋಡಿದ ನೆಟ್ಟಿಗರು ಪ್ರತಾಪ್ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಗೆಬಗೆಯ ಕಾಮೆಂಟ್ ಮೂಲಕ ಕಾಲೆಳೆಯುತ್ತಿದ್ದಾರೆ. ಈ ಬಾರಿ ಯಾವ ರಾಕೆಟ್ ಹಾರಿಸ್ತೀರಾ ಅಣ್ಣಾ ಎಂದು ನೆಟ್ಟಿಗರೊಬ್ಬರು ಕೇಳಿದರೆ, ಇನ್ನೊಬ್ಬ ಅಣ್ಣಾ ಮಿಕ್ಸಿ ರಿಪೇರಿ ಮಾಡುತ್ತಿದ್ದೀರಾ ಎಂದಿದ್ದಾರೆ. ಕಾಗೆ ಪ್ರತಾಪ ಎಂದು ಮಗದೊಬ್ಬ ನೆಟ್ಟಿಗ ವ್ಯಂಗ್ಯವಾಡಿದ್ದಾರೆ. ಅಣ್ಣಾ ನನ್ನ ಇಯರ್ ಫೋನ್ನಲ್ಲಿ ಒಂದು ಬದಿ ಕೇಳುತ್ತಿಲ್ಲ, ರಿಪೇರಿ ಮಾಡಿ ಕೊಡು, ಸಾಲ್ಡರಿಂಗ್ ಮಾಡೋಕೆ ಈ ರೀತಿಯ ಬಿಲ್ಡಪ್ ಬೇಕಾ?, ಅಣ್ಣನ ಮರು ವಿಶ್ವರೂಪ, ಬ್ರೊ ತುರ್ತಾಗಿ ಶಿವಮೊಗ್ಗದಿಂದ ವಿಜಯಪುರಕ್ಕೆ ಒಂದು ಬ್ಲಡ್ ಬಾಟಲ್ ಕಳುಹಿಸಬೇಕಿತ್ತು. 10 ನಿಮಷದಲ್ಲಿ ಕಳುಹಿಸಬೇಕು. ನಿಮ್ಮ ಡ್ರೋಣ್ ಕಳುಹಿಸಿ, ನಮಗೆ ಸಹಾಯವಾಗುತ್ತೆ ಎಂಬಿತ್ಯಾದಿ ಬಗೆಬಗೆಯ ಕಾಮೆಂಟ್ಗಳ ಮೂಲಕ ಡ್ರೋನ್… ಅಲ್ಲ ಅಲ್ಲ ಕಾಗೆ ಪ್ರತಾಪ್ನನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
Follow us on Social media