ಬೆಂಗಳೂರು : ಆಗಸ್ಟ್‌ನಲ್ಲಿ ದ್ವಿತೀಯ ಪಿಯುಸಿಗೆ ಪೂರಕ ಪರೀಕ್ಷೆ ನಡೆಯಲಿದ್ದು, ಜೂನ್ ತಿಂಗಳಾಂತ್ಯಕ್ಕೆ ಪೂರಕ ಪರೀಕ್ಷೆ ದಿನಾಂಕ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
2022ರ ಏಪ್ರಿಲ್/ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಶೇ. 61.80 ಫಲಿತಾಂಶ ಬಂದಿದ್ದು, ಶೇ. 61.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಗಸ್ಟ್‌ನಲ್ಲಿ ಪೂರಕ ಪರೀಕ್ಷೆ ನಡೆಯಲಿದ್ದು, ಈ ತಿಂಗಳಾಂತ್ಯಕ್ಕೆ ದಿನಾಂಕ ಪ್ರಕಟಿಸಲಾಗುತ್ತದೆ. ಅನುತ್ತೀರ್ಣಗೊಂಡವರು ಮರು ಮೌಲ್ಯಮಾಪನದ ಫಲಿತಾಂಶಕ್ಕೆ ಕಾಯದೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಿದರೆ ಉತ್ತಮ ಎಂದರು.
ಇಂದಿನಿಂದಲೇ ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಡಿಮೆ ಫಲಿತಾಂಶ ಪಡೆದವರು ಧೃತಿಗೆಡಬಾರದು. ಪರೀಕ್ಷೆಯೇ ಜೀವನ ನಿರ್ವಹಣೆಗೆ ಅಂತಿಮ ದಾರಿಯಲ್ಲ. ಧೈರ್ಯವಾಗಿ ಜೀವನದ ಎಲ್ಲಾ ಸೋಲು-ಗೆಲುವುಗಳನ್ನು ಎದುರಿಸುವ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು ಎಂದವರು ಇದೇ ವೇಳೆ ಸಲಹೆ ಮಾಡಿದರು.
Follow us on Social media