ಬೆಂಗಳೂರು: ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಅತ್ಯುನ್ನತ ಮಟ್ಟದ ಸಾಧನೆ ಮಾಡುವ ಮೂಲಕ ಅರ್ಜುನ, ಧ್ಯಾನ್ ಚಂದ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದ ಸಾಧಕರನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.
ಕಂಠೀರವ ಕ್ರೀಡಾಂಗಣದ ಕರ್ನಾಟಕ ಒಲಿಂಪಿಕ್ ಭವನದಲ್ಲಿ ಶನಿವಾರ ಭಾರತೀಯ ಬಾಸ್ಕೆಟ್ ಬಾಲ್ ಫೆಡರೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ದಿಗ್ಗಜ ಸಾಧಕರಿಗೆ ಮೈಸೂರು ಪೇಟ ತೊಡಿಸಿ, ನೆನಪಿನ ಕಾಣಿಕೆ ಹಾಗೂ ರೂ.1 ಲಕ್ಶಗಳ ಪ್ರಶಸ್ತಿ ಮೊತ್ತ ವಿತರಿಸಿದರು.
ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ಎನ್ನುವುದು ಅವರ ವರ್ಚಸ್ಸನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಒಂದೇ ಕೈಯಲ್ಲಿ ಚೆಂಡನ್ನು ಬ್ಯಾಲೆನ್ಸ್ ಮಾಡಿಕೊಂಡು ಗೋಲ್ ಪೋಸ್ಟ್’ಗೆ ಎಸೆದಂತೆ ರಾಜಕೀಯವನ್ನು ಕೂಡ ಒಂದೇ ನಿಟ್ಟಿನಲ್ಲಿ ಕೊಂಡೊಯ್ಯಬೇಕಿದೆ. ಕ್ರೀಡೆ ದೇಶಕ್ಕೆ ಹೆಚ್ಚಿನ ಬಲ ತಂದುಕೊಡಲಿದೆ ಎಂದು ಹೇಳಿದರು.
1970ರಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಗುಲಾಮ್ ಅಬ್ಬಾಸ್, 75ರಲ್ಲಿ ಹನುಮಾನ್ ಸಿಂಗ್, 78ರಲ್ಲಿ ವಿಜಯರಾಘವನ್, 82ರಲ್ಲಿ ಅಜ್ಮೀರ್ ಸಿಂಗ್, 83ರಲ್ಲಿ ಸುಮನ್ ಶರ್ಮಾ, 99ರಲ್ಲಿ ಸಜ್ಜನ್ ಸಿಂಗ್ ಚೀಮಾ, 2019ರಲ್ಲಿ ವಿಶೇಶ್ ಬೃಗುವಂಶಿ, 2003ರಲ್ಲಿ ಧ್ಯಾನ್ ಚಂದ್ ವಿಜೇತ ರಾಮ್ ಕುಮಾರ್, 2020ರಲ್ಲಿ ಪದ್ಮಶ್ರೀ ವಿಜೇತ ಅನಿತಾ ಪಾಲ್ ದುರೈರನ್ನು ಸನ್ಮಾನಿಸಲಾಯಿತು.
1969ರಲ್ಲಿ ಹರಿದತ್ ಕಪ್ರಿ, ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಮೊದಲ ಅರ್ಜುನ ಪ್ರಶಸ್ತಿ ತಂದುಕೊಟ್ಟಿದ್ದರು. ಈ ವೇಳೆ ಭಾರತ ಬಾಸ್ಕೆಟ್ ಬಾಲ್ ಫೆಡರೇಷನ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಚಂದ್ರಮುಖಿ ಶರ್ಮಾ, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕ್ರೀಡಾ ಇಲಾಖೆ ಆಯುಕ್ತ, ಕೆ.ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Follow us on Social media