ಬೆಂಗಳೂರು : ಕಾಂಗ್ರೆಸ್ನವರು ಹಾಗೂ ಎಡಪಂಥೀಯರು ಅಗ್ನಿಪಥ್ ಯೋಜನೆಯ ಮೂಲ ಉದ್ದೇಶ ಅರಿಯದೆ ಯುವಕರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ರವಿವಾರ ಮಾತನಾಡಿದ ಅವರು, ದೇಶಭಕ್ತಿ ಇರುವವರು ಸೇನೆಗೆ ಸೇರುತ್ತಾರೆ. ಇಲ್ಲದಿದ್ದವರು ಸಿದ್ದರಾಮಯ್ಯನವರ ರೀತಿ ಬೇಜವಾಬ್ದಾರಿಯಾಗಿ ಮಾತನಾಡುತ್ತಾರೆ. ಸರ್ಕಾರದ ಉತ್ತಮ ಕೆಲಸಗಳನ್ನು ಟೀಕಿಸಿ ಜನರನ್ನು ಅದರ ವಿರುದ್ದ ನಿಲ್ಲುವಂತೆ ಮಾಡುವುದಷ್ಟೇ ಇಂತಹವರ ಉದ್ದೇಶ ಎಂದವರು ವಾಗ್ದಾಳಿ ನಡೆಸಿದರು.
ಸೇನಾ ತರಬೇತಿಯನ್ನು ಶಿಕ್ಷಣದ ಜೊತೆಗೇ ನೀಡುತ್ತಿರುವ ಕಾರ್ಯ ಜಗತ್ತಿನ ಎಂಟು ದೇಶಗಳಲ್ಲಿ ನಡೆಯುತ್ತಿದೆ. ಬೇರೆ ದೇಶಗಳಲ್ಲಿಯೂ ಅಗ್ನಿಪಥ್ ಮಾದರಿಯಲ್ಲೇ ಸೇನೆಗೆ ನೇಮಕಾತಿ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ. ದುರ್ಬಲ ಯೋಜನೆಯಲ್ಲ, ಇದೊಂದು ಸಬಲ ಯೋಜನೆ ಎಂಬುದನ್ನು ದೇಶದಲ್ಲಿರುವ ಎಡಬಿಡಂಗಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಸಿದ್ದಾಂತ ಇಲ್ಲದವರು ಸಿದ್ದರಾಮಯ್ಯನವರ ರೀತಿಯಲ್ಲಿ ಅನರ್ಥ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಅವರೊಬ್ಬ ಎಡಬಿಡಂಗಿ. ಅಗ್ನಿಪಥ್ ಎಂಬುದು ಭಾರತ ಮಾತೆಯ ಸೇವೆಗೆ ಇರುವ ಅವಕಾಶ ಎಂದವರು ಇದೇ ವೇಳೆ ತಿಳಿಸಿದರು.
Follow us on Social media