ಬೆಂಗಳೂರು : ಕೊರೋನಾ ಸೋಂಕಿಗೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ್ದು, ಜನವರಿ ಅಥವಾ ಫೆಬ್ರವರಿಯಲ್ಲಿ ಎರಡನೇ ಅಲೆ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಡಿ.20 ರಿಂದ ಜ.2ರ ವರೆಗೆ 45 ದಿನಗಳು ನಿರ್ಣಾಯಕ ಅವಧಿಯಾಗಿದೆ. ಈ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ತಜ್ಞರ ಸಮಿತಿ ಸಲಹೆ ನೀಡಿದೆ ಎಂಬುವುದಾಗಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
ವಿಧಾನ ಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ, ಹಿರಿಯ ಅಧಿಕಾರಿಗಳ ಜೊತೆ ಸಚಿವರು ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ತಾಂತ್ರಿಕ ಸಲಹಾ ಸಮಿತಿ ವರದಿಯ ಪ್ರಕಾರ ಜನವರಿ ಅಥವಾ ಫೆಬ್ರವರಿಯಲ್ಲಿ ಎರಡನೇ ಅಲೆ ಬರುವ ಸಾಧ್ಯತೆ ಇದೆ. ಕೋವಿಡ್ ಅಲೆ ಬಂದೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬರುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದಿರಲು ತಜ್ಞರು ತಿಳಿಸಿದ್ದಾರೆ. ಅಲ್ಲದೆ, ಸೋಂಕು ನಿಯಂತ್ರಿಸುವ ಬಗ್ಗೆಯೂ ಸಲಹೆ ನೀಡಿದ್ದಾರೆ. ತಜ್ಞರು ನೀಡಿದ ಸಲಹೆಯನ್ನು ಮುಖ್ಯಮಂತ್ರಿ ಅವರ ಜೊತೆ ಚೆರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಜನರು ಗುಂಪು ಸೇರುವುದು ಸಾಮಾನ್ಯವಾಗಿದೆ. ಅದರ ಬಗ್ಗೆ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ. ಎಲ್ಲಾ ಧರ್ಮದ ಹಬ್ಬಗಳನ್ನು ನಿಯಂತ್ರಿಸಬೇಕು. ಮದುವೆ, ಸಮಾರಂಭದಲ್ಲಿ 100 ಜನಕ್ಕಿಂತ ಹೆಚ್ಚು ಮಂದಿ ಮೀರಬಾರದು. ಬಹಿರಂಗ ಸಭೆ, ರಾಜಕೀಯ ಸಭೆ ಸಮಾರಂಭಗಳಲ್ಲಿ 200 ಜನ ಮೀರಬಾರದು ಎಂದು ಸಮಿತಿ ಸೂಚನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
Follow us on Social media