ಬೆಂಗಳೂರು: ರಾಜ್ಯದಲ್ಲಿ 21 ದಿನಗಳ ಲಾಕ್ಡೌನ್ ಅವಧಿ ಮುಗಿಯುತ್ತಿದ್ದಂತೆ ಸೀಲ್ಡೌನ್ ಜಾರಿ ಮಾತುಗಳು ಬಹಳವಾಗಿ ಕೇಳಿ ಬರುತ್ತಿವೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟನೆ ನೀಡಿದ್ದು, ಸದ್ಯಕ್ಕೆ ಬೆಂಗಳೂರಿನಲ್ಲಿ ‘ಸೀಲ್ಡೌನ್’ ಇಲ್ಲ. ವದಂತಿ ಮತ್ತು ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.
”ಬೆಂಗಳೂರು ಸೀಲ್ ಡೌನ್ ಆಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಸೀಲ್ ಡೌನ್ ಎಂದರೆ ಮನೆಯಿಂದ ಯಾರು ಹೊರೆಗೆ ಬರುವಂತಿಲ್ಲ. ಮಾಧ್ಯಮದವರು ಸಹ ಹೊರೆಗೆ ಬರುವಂತಿಲ್ಲ. ಅಂತಹ ಸಮಯದಲ್ಲಿ ಕೇವಲ ಬಿಬಿಎಂಪಿ ಮತ್ತು ಪೊಲೀಸ್ ಸಿಬ್ಬಂದಿ ಬಿಟ್ಟರೆ ಬೇರೆಯವರು ಹೊರಗೆ ಬರುವಂತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಸದ್ಯಕ್ಕೆ ಬೆಂಗಳೂರಿನಲ್ಲಿ ‘ಸೀಲ್ಡೌನ್’ ಮಾಡುವ ಪರಿಸ್ಥತಿ ಇನ್ನೂ ಬಂದಿಲ್ಲ ಎಂದರು.
ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ನಿಯಂತ್ರಿಸಲು ಸೀಲ್ಡೌನ್ ಅಗತ್ಯ ಎಂಬ ಸುದ್ದಿ ಮಾಧ್ಯಮದಲ್ಲಿ ವ್ಯಾಪಕವಾಗುತ್ತಿದೆ. ರಾಜ್ಯಾದ್ಯಂತ ಕೊರೋನಾ ಕೇಸ್ ಹೆಚ್ಚಿರುವ ಜಿಲ್ಲೆಗಳನ್ನು ಡೇಂಜರ್ ಝೋನ್ ಎಂದು ಗುರುತಿಸಿ, ಆ ಜಿಲ್ಲೆಗಳನ್ನು ಮಾತ್ರ ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗುತ್ತೆ ಎನ್ನಲಾಗುತ್ತಿದೆ.
ಈ ನಡುವೆ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸಂಪೂರ್ಣವಾಗಿ ಸೀಲ್ ಡೌನ್ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿತ್ತು. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಡಿಸಿಪಿಗಳ ಸಭೆ ಕರೆದಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸದ್ಯಕ್ಕೆ ನಗರದಲ್ಲಿ ಇಂತಹ ಪರಿಸ್ಥಿತಿ ಬಂದಿಲ್ಲ. ಆರಾಮಾಗಿರಿ” ಎಂದು ಆಯುಕ್ತ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.
Follow us on Social media