Breaking News

ಬೆಂಗಳೂರಿನಲ್ಲಿ ಬುಧವಾರ ಒಂದೇ ದಿನ 1,000 ಸಾವಿರ ವಾಹನ ಜಪ್ತಿ

ಬೆಂಗಳೂರು: ಲಾಕ್‌ಡೌನ್‌ ನಡುವೆಯೂ ಬೆಂಗಳೂರಿನಲ್ಲಿ ಮಂಗಳವಾರ ಬೇಕಾಬಿಟ್ಟಿ ವಾಹನ ಸಂಚರಿಸಿ ಟ್ರಾಫಿಕ್ ಜಾಮ್‌ ಉಂಟಾದ ವಿಷಯ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೆ ಕಾರ್ಯಾಚರಣೆ ಚುರುಕುಗೊಳಿಸಿದ ಬೆಂಗಳೂರು ನಗರ ಪೊಲೀಸರು, ಬುಧವಾರ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸಿ 1ಸಾವಿರಕ್ಕೂ ಅಧಿಕ ವಾಹನಗಳನ್ನು ಜಪ್ತಿ ಮಾಡಿದ್ದಾರೆ. 

ಮಂಗಳವಾರ ರಾತ್ರಿ ಯವರೆಗೆ 39 ಸಾವಿರ ವಾಹನಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಖಾಸಗಿ ಜಾಗದಲ್ಲಿ ನಿಲ್ಲಿಸಿ ಭದ್ರತೆ ಕೈಗೊಂಡಿದ್ದಾರೆ. ಅಗತ್ಯ ಸೇವೆ ಯೋಜನೆಯಡಿ ಓಡಾಡುವ ಬಿಬಿಎಂಪಿ, ಬಿಡಬ್ಲ್ಯೂಎಸ್‍ಎಸ್‍ಬಿ, ಆರೋಗ್ಯ ಇಲಾಖೆ ಸಿಬ್ಬಂದಿಗಳ ವಾಹನಗಳನ್ನು ತಪಾಸಣೆ ನಡೆಸಲಾಗುತ್ತದೆ. ಪಾಸ್ ಇಲ್ಲದೆ ಸಂಚಾರ ಮಾಡುತ್ತಿದ್ದ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ಸೀಜ್ ಮಾಡಲಾಗುತ್ತಿದೆ. ಮೈಸೂರು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೈಕ್ ಮೇಲೆ ಮಲ್ಯ ಆಸ್ಪತ್ರೆ ಸಿಬ್ಬಂದಿ ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದ. ಆತನ ಐಡಿ ಕಾರ್ಡ್ ಕೇಳಿದಾಗ ಮನೆಯಲ್ಲಿ ಬಿಟ್ಟು ಬಂದಿದ್ದೇನೆ ಎಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ. ಆದರೆ, ಇದಾವುದನ್ನೂ ಲೆಕ್ಕಿಸದ ಪೊಲೀಸರು ಆತನ ವಾಹನವನ್ನು ಸೀಜ್ ಮಾಡಿದ್ದಾರೆ.

ಬುಧವಾರ ಮುಂಜಾನೆಯಿಂದಲೇ ಕಾರ್ಯಾಚರಣೆಗಿಳಿದ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಿ ಅನಗತ್ಯವಾಗಿ ಓಡಾಡುತ್ತಿದ್ದ 1000ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ರಸ್ತೆಯಲ್ಲಿ ಓಡಾಡುವ ಪ್ರತಿಯೊಂದು ವಾಹನಗಳ ನಂಬರ್ ನೋಟ್ ಮಾಡಿಕೊಳ್ಳುತ್ತಿದ್ದು, ವಾಹನ ಸವಾರರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದೇ ರೀತಿ ನಗರದ ಅಷ್ಟ ದಿಕ್ಕುಗಳಲ್ಲೂ ದಿಗ್ಬಂಧನ ವಿಧಿಸಿರುವ ಪೊಲೀಸರು ಪ್ರತಿಯೊಂದು ವಾಹನವನ್ನೂ ತಪಾಸಣೆ ನಡೆಸುತ್ತಿದ್ದಾರೆ. ಪರ್ಯಾಯ ರಸ್ತೆ ಬಂದ್: ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ಓಡಾಡುವುದನ್ನು ತಗ್ಗಿಸಲು ನಗರದ ಪರ್ಯಾಯ ರಸ್ತೆಗಳನ್ನು ಪೊಲೀಸರು ಸಂಪೂರ್ಣ ಬಂದ್ ಮಾಡಿದ್ದಾರೆ. ಅರ್ಧ ಕಿಲೋ ಮೀಟರ್ ಸಾಗಬೇಕಾದರೆ ಐದು ಕಿಲೋ ಮೀಟರ್‍ ಗಳಿಗೂ ಹೆಚ್ಚು ಪ್ರದೇಶವನ್ನು ಸುತ್ತಿಹಾಕಿಕೊಂಡು ಬರುವಂತೆ ವ್ಯವಸ್ಥೆ ಮಾಡಿದ್ದಾರೆ.

ಕೆಲವು ಪರ್ಯಾಯ ಮಾರ್ಗಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು, ವಾಹನ ಸವಾರರು ಪ್ರಮುಖ ರಸ್ತೆಗಳಲ್ಲೇ ಸಂಚರಿಸಬೇಕಾಗಿದೆ. ಲಾಲ್‍ಬಾಗ್ ರಸ್ತೆಯಿಂದ ಕೆಆರ್ ಮಾರುಕಟ್ಟೆಗೆ ತೆರಳುವ ಮಾರ್ಗ, ಜೆಸಿ ನಗರದಿಂದ ಮಿನರ್ವ ವೃತ್ತಕ್ಕೆ ತೆರಳುವ ಮಾರ್ಗ, ರಾಮಕೃಷ್ಣ ಆಶ್ರಮದಿಂದ ಮೈಸೂರು ರಸ್ತೆ ಕಡೆಗೆ ಸಂಚರಿಸುವ ಮಾರ್ಗ, ಜಯನಗರದಿಂದ ಸೌತ್‍ಎಂಡ್ ವೃತ್ತಕ್ಕೆ ತೆರಳುವ ಮಾರ್ಗ, ಜಯನಗರದಿಂದ ಆರ್‍ವಿ ರಸ್ತೆಗೆ ತೆರಳುವ ಪರ್ಯಾಯ ಮಾರ್ಗಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ಮಂಗಳವಾರ ಪೊಲೀಸರು ಸ್ವಲ್ಪ ಮೈ ಮರೆತ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿತ್ತು. ಹಲವಾರು ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಎದುರಾಗಿತ್ತು. ಮಾತ್ರವಲ್ಲ, ನಗರದಲ್ಲಿ ವಾಹನಗಳ ಓಡಾಟ ಹೆಚ್ಚಾಗಿರುವ ಕುರಿತಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಪತ್ರ ಬರೆದು ಬೇಸರ ವ್ಯಕ್ತಪಡಿಸಿದ್ದರು.

Source : UNI

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×