ಹುಬ್ಬಳ್ಳಿ: ಬಿಜೆಪಿ ಆಡಳಿತೂರಾಢ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ರಾಜಕೀಯ ಪಿತೂರಿ ನಡೆಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ.
ಬೆಂಗಳೂರು ಹಿಂಸಾಚಾರ ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿ ಆಡಳಿತೂರಾಢ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ರಾಜಕೀಯ ನಡೆಸಲಾಗಿದೆ. ಘಟನೆಗೆ ಕಾರಣಕರ್ತರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ವೇದಿಕೆಯಲ್ಲಿಯೇ ಆದರೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಇಂತಹ ಪರಿಸ್ಥಿತಿಗಳು ಎದುರಾದಾಗ ಜನರಿಗೆ ಪ್ರತಿಭಟನೆ ನಡೆಸುವ ಹಕ್ಕಿದೆ. ಕಾನೂನು ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಸಮಾಜದ ಶಾಂತಿ ಕದಡುವ ಇಂತಹ ಬೆಳವಣಿಗೆಗಳನ್ನು ಸಹಿಸಲು ಸಾಧ್ಯವಿಲ್ಲ. ಘಟನೆಯ ಸಂಪೂರ್ಣ ಚಿತ್ರಣವನ್ನು ಗಮನಿಸಿದರೆ, ಇದನ್ನು ಯಾರೋ ಸಂಘಟಿಸಿರುವಂತಿದೆ.
ಏಕಕಾಲಕ್ಕೆ ಮೂರು ಸಾವಿರ ಜನ ಸೇರಿರುವುದು, ಅಷ್ಟೊಂದು ಕಲ್ಲು, ಪೆಟ್ರೋಲ್ ಸಂಗ್ರಹಿಸಿರುವುದು, ಪೊಲೀಸರು, ಮಾಧ್ಯಮದವರ ಮೇಲೆ ಹಲ್ಲೆ ನಡೆಸಿರುವುದು, ಅಲ್ಲಲ್ಲಿ ಬೆಂಕಿ ಹಚ್ಚಿರುವುದನ್ನು ಗಮನಿಸಿದರೆ ಇದೊಂದು ಅತ್ಯಂತ ಪೂರ್ವಯೋಜಿತ ಹಾಗೂ ಇದರ ಹಿಂದೆ ಯಾರದೋ ಕೈವಾಡ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಸಿಎಎ ಪ್ರತಿಭಟನೆ ವೇಳೆಯೂ ಮಂಗಳೂರಿನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಹಿಂಸಾಚಾರದಲ್ಲಿ ಪಿಎಫ್ಐ, ಎಸ್’ಡಿಪಿಐ ಕೈವಾಡವಿರುವ ಸಾಧ್ಯತೆಗಳಿವೆ ಎಂದು ಆರೋಪಿಸಿದ್ದಾರೆ.
Follow us on Social media