ಬೆಂಗಳೂರು: ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ, ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ಇತರ ಅಗತ್ಯ ಸೇವೆಗಳ ಸಿಬ್ಬಂದಿಗಳಿಗೆ, ಸಂಸ್ಥೆಯಿಂದ ಮಾಸಿಕ ಪಾಸ್ ಪಡೆದು, ಇಲಾಖೆ, ಸಂಸ್ಥೆಯ ಗುರುತಿನ ಚೀಟಿ ತೋರಿಸಿ ಸಾರಿಗೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಕೇಂದ್ರ/ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿ/ನೌಕರರು, ಅರೆ ಸರ್ಕಾರಿ ಸಂಸ್ಥೆಗಳ ಅಧಿಕಾರಿ/ನೌಕರರು, ಸಾರ್ವಜನಿಕ ಉದ್ದಿಮೆಗಳು/ ನಿಗಮಗಳು/ ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ/ನೌಕರರು, ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ/ನೌಕರರು, ವಿಮಾ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರು, ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು(ವೈದ್ಯರು, ಆಸ್ಪತ್ರೆ ಔಷಧಾಲಯ, ಆರೋಗ್ಯ ಸೇವಾ ಅಧಿಕಾರಿ/ಸಿಬ್ಬಂದಿಗಳು, ವಾರ್ಡ್ ಬಾಯ್ಸ್, ವೈದ್ಯಕೀಯ ತಂತ್ರಜ್ಞರು, ಆಶಾ ಕಾರ್ಯಕರ್ತೆಯರು ಇತ್ಯಾದಿ) ಮತ್ತು ಪತ್ರಕರ್ತರಿಗೆ (ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮೀಡಿಯ) ಪಾಸ್ ಪಡೆದು ಕಾರ್ಯನಿರ್ವಹಿಸಬಹುದು.
ಕೆಂ.ಬ.ನಿಲ್ದಾಣ , ಬನಶಂಕರಿ ಟಿಟಿಎಂಸಿ, ಶಾಂತಿನಗರ ಟಿಟಿಎಂಸಿ , ಜಯನಗರ ಟಿಟಿಎಂಸಿ, ವಿಜಯನಗರ ಟಿಟಿಎಂಸಿ , ಕೆಂಗೇರಿ ಟಿಟಿಎಂಸಿ , ಯಶವಂತಪುರ ಟಿಟಿಎಂಸಿ , ಯಲಹಂಕ ಉಪನಗರ, ಮಲ್ಲೇಶ್ವರಂ 18 ನೇ ಕ್ರಾಸ್, ಹೊಸಕೋಟೆ, ದೊಮ್ಮಲೂರು ಟಿಟಿಎಂಸಿ, ಕೋರಮಂಗಲ ಟಿಟಿಎಂಸಿ ಮುಂತಾದ ಸ್ಥಳಗಳಲ್ಲಿ ಪಾಸ್ ಪಡೆದುಕೊಳ್ಳಬಹುದು. ಪಾಸುಗಳನ್ನು ವಿಧಾನ ಸೌಧ, ವಿಕಾಸ ಸೌಧ, ಎಂ.ಎಸ್. ಬಿಲ್ಡಿಂಗ್, ಶಾಂತಿನಗರ ಸಮುಚ್ಛಯ, ಬೆಂಗಳೂರು ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ, ಬೆಂಗಳೂರು ವಿದ್ಯುತ್ ಕಂಪನಿ, ಕಂದಾಯ ಭವನ, ಖನಿಜ ಭವನ, ಆನಂದ್ ರಾವ್ ವೃತ್ತ, ಕೆ.ಆರ್.ವೃತ್ತ ಮುಂತಾದ ಪ್ರಮುಖ ಸರ್ಕಾರಿ ಕಛೇರಿಗಳಲ್ಲಿ ಈ ಇಲಾಖೆಗಳ ಸಿಬ್ಬಂದಿಗಳಿಗೆ ವಿತರಿಸಲಾಗುವುದು. ಪಾಸುಗಳನ್ನು ಪಡೆಯಲು ಸಿಬ್ಬಂದಿಯು ಇಲಾಖೆ/ಸಂಸ್ಥೆ ನೀಡಿರುವ ಗುರುತಿನ ಚೀಟಿಯನ್ನು ತೋರಿಸಬೇಕು. ಮಾಸಿಕ ಪಾಸಿನ ಮೇಲೆ ಗುರುತಿನ ಚೀಟಿಯ ವಿವರಗಳನ್ನು ನಮೂದಿಸಲಾಗುತ್ತದೆ.
ಈ ಪಾಸುಗಳು ಮೇ 8 ರಿಂದ 31 ರವರೆಗೆ ಮಾನ್ಯತೆ ಹೊಂದಿರುತ್ತವೆ. ಮಾಸಿಕ ಪಾಸಿನ ಮೊತ್ತ ರೂ.850 ನಿಗದಿಪಡಿಸಲಾಗಿದೆ. ಚಾಲನಾ ಸಿಬ್ಬಂದಿಗಳು ಕಡ್ಡಾಯವಾಗಿ ಮುಖಗವಸು, ಕೈಗವಚಗಳನ್ನು ಧರಿಸುವುದು ಹಾಗೂ ಸ್ಯಾನಿಟೈಸರ್‌ನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ಬಸ್ಸಿನ ಎಲ್ಲಾ ಕಿಟಕಿಗಳನ್ನು ತೆರೆದ ಸ್ಥಿತಿಯಲ್ಲಿಡಬೇಕು, ಸರ್ಕಾರದ ಮಾರ್ಗಸೂಚಿಯಂತೆ ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಾರಿಗೆ ಸೇವೆಗಳಲ್ಲಿ ಪ್ರಯಾಣಿಸುವ ನೌಕರರು/ ಸಿಬ್ಬಂದಿಗಳು ಮೂಗು ಮತ್ತು ಬಾಯಿ ಮುಚ್ಚಿಕೊಳ್ಳುವಂತೆ ಮುಖಗವಸುಗಳನ್ನು ಕಡ್ಡಾಯವಾಗಿ ಧರಿಸಿರಬೇಕು. ಮುಖಗವಸು ಧರಿಸದ ಪ್ರಯಾಣಿಕರಿಗೆ ಬಸ್ಸನ್ನು ಹತ್ತಲು ಅವಕಾಶ ನೀಡಬಾರದು. ಬಸ್ಸುಗಳಲ್ಲಿ ಯಾವುದೇ ಭಾರಿ ಲಗ್ಗೇಜುಗಳನ್ನು ಸಾಗಿಸಲು ಅವಕಾಶವಿರುವುದಿಲ್ಲ. ಸಾರಿಗೆ ಸೇವೆಗಳಲ್ಲಿ ಅನುಮತಿಸಲಾದ ಸಿಬ್ಬಂದಿಗಳನ್ನು ಹೊರತುಪಡಿಸಿ, ಬೇರೆ ಸಾರ್ವಜನಿಕರು ಪ್ರಯಾಣಿಸಲು ಅವಕಾಶವಿಲ್ಲ. ಸಾರಿಗೆ ಸೇವೆಗಳಲ್ಲಿ ಜ್ವರ ಹಾಗೂ ಇತರೆ ಖಾಯಿಲೆಗಳಿಂದ ಬಳಲುತ್ತಿರುವ ಪ್ರಯಾಣಿಕರು ಪ್ರಯಾಣಿಸಲು ಅವಕಾಶವಿರುವುದಿಲ್ಲ. ಬಸ್ಸುಗಳಲ್ಲಿ ಶುಚಿತ್ವ ಹಾಗೂ ಸೋಂಕು ನಿವಾರಣೆಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
Follow us on Social media